- -ಭಾರತ ತಂಡಕ್ಕೆ ಸಚಿವ ಹೆಚ್ಡಿಕೆ ಅಭಿನಂದನೆ
ಬೆಂಗಳೂರು: ಟಿ-20 ವಿಶ್ವಕಪ್ನ (T20 World Cup) ರಣರೋಚಕ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ (Siddaramaiah), ಹೆಚ್ಡಿ ಕುಮಾರಸ್ವಾಮಿ (HD Kumaraswamy) ಸೇರಿದಂತೆ ಗಣ್ಯರು ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅದರಲ್ಲೂ ದೆಹಲಿ ಪ್ರವಾಸದಲ್ಲಿದ್ದ ಸಿಎಂ ಸಿದ್ದರಾಮಯ್ಯ ತಮಗೆ ಸಿಕ್ಕ ಕೊಂಚ ಬಿಡುವಿನ ಸಮಯದಲ್ಲೂ ಪಂದ್ಯ ವೀಕ್ಷಿಸಿದ್ದು ಸಂತಸವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಟೀಂ ಇಂಡಿಯಾ ರೋಚಕ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನ ಭಾರತ ಮಣಿಸಿ ಕ್ರಿಕೆಟ್ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಸಿಎಂ ಸಿದ್ದರಾಮಯ್ಯ ತಾವು ದೆಹಲಿ ಪ್ರವಾಸದಲ್ಲಿದ್ದರೂ ಸಹ ಸಮಯ ಸಿಕ್ಕಗೆಲ್ಲ ಪಂದ್ಯ ವೀಕ್ಞಿಸಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಭಾರತ ಹೊರಹೊಮ್ಮಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ ಎಕ್ಸ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: 2ನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ, ವಿಶ್ವ ಕ್ರಿಕೆಟ್ಗೆ ಸಾಮ್ರಾಟ
ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಅಭಿನಂದನೆಗಳು. ನಮ್ಮವರು ತೋರಿದ ಸಂಘಟಿತ ಪ್ರದರ್ಶನ ಪಂದ್ಯದ ದಿಕ್ಕನ್ನೇ ಬದಲಿಸಿತು. ಇಡೀ ಟೂರ್ನಿಯಲ್ಲಿ ಒಂದು ಪಂದ್ಯವನ್ನೂ ಸೋಲದೆ ಅಜೇಯರಾಗುಳಿದು ವಿಶ್ವಕಪ್ ಟಿ20 ಜಯಿಸಿದ ಭಾರತ ತಂಡದ ಸಾಧನೆ ನಿಜಕ್ಕೂ ಶ್ಲಾಘನೀಯ. ಕಡೇ ಕ್ಷಣದಲ್ಲಿ ಪಂದ್ಯ ಸೋತಿರುವ ದ.ಆಫ್ರಿಕಾ ತಂಡದ ಆಟವೂ ಮೆಚ್ಚತಕ್ಕದ್ದೆ. ಇದೊಂದು ಐತಿಹಾಸಿಕ ಕ್ಷಣ. ಕ್ರಿಕೆಟ್ ಪ್ರೇಮಿಯಾದ ನನಗೆ ನಮ್ಮವರ ಗೆಲುವು ಅತ್ಯಂತ ಖುಷಿಕೊಟ್ಟಿದೆ. ಕೋಟ್ಯಂತರ ಜನರ ಹರಕೆ, ಹಾರೈಕೆಗಳು ಕಡೆಗೂ ಫಲಕೊಟ್ಟಿದೆ. ವಿಶ್ವಕಪ್ ಮರಳಿ ಭಾರತದ ಮಡಿಲು ಸೇರಿದೆ ಎಂದು ಟ್ವೀಟ್ ಮಾಡಿದ್ದಾರೆ.
ಭಾರತ ಕ್ರಿಕೆಟ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಸಚಿವ ಕುಮಾರಸ್ವಾಮಿ
ಇನ್ನು ಭಾರತ ಕ್ರಿಕೆಟ್ ತಂಡಕ್ಕೆ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಟಿ20 ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸಿದ ರೋಹಿತ್ ಶರ್ಮ ನೇತೃತ್ವದ ಭಾರತ ತಂಡಕ್ಕೆ ಶುಭಾಶಯಗಳು ಮತ್ತು ಸಮಸ್ತ ಭಾರತೀಯರ ಪರವಾಗಿ ಅಭಿನಂದನೆಗಳು. ಅನೇಕ ರೋಚಕ ತಿರುವುಗಳ ಫೈನಲ್ ಪಂದ್ಯ ಭಾರತೀಯರೆಲ್ಲರನ್ನೂ ತುದಿಗಾಲ ಮೇಲೆ ನಿಲ್ಲಿಸಿತ್ತು. ಎಲ್ಲರ ಆಕಾಂಕ್ಷೆ, ನಿರೀಕ್ಷೆಯಂತೆ ಭಾರತ ಗೆದ್ದು ಬೀಗಿದೆ. ನಮ್ಮ ಹೆಮ್ಮೆಯ ತಂಡಕ್ಕೆ ಶುಭವಾಗಲಿ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಡೆಂಗ್ಯೂಗೆ ಬಲಿಯಾದವರ ಮಾಹಿತಿ ನೀಡಲು ಸೂಚನೆ

