ಬಿಗ್‌ಬಾಸ್ ಶೋ ಹಾಗೂ ನಟ ಕಿಚ್ಚ ಸುದೀಪ್ ವಿರುದ್ಧ ದೂರು ದಾಖಲಾಗಿದೆ. ಕಾರ್ಯಕ್ರಮದ ವೇಳೆ ರಣಹದ್ದುಗಳ ಬಗ್ಗೆ ನಟ ಸುದೀಪ್ ಬಳಸಿದ ಪದಗಳು ಆಕ್ಷೇಪಾರ್ಹವಾಗಿವೆ ಎಂಬ ಆರೋಪದ ಹಿನ್ನೆಲೆ ಈ ದೂರು ಸಲ್ಲಿಕೆಯಾಗಿದೆ.
ರಣಹದ್ದುಗಳು “ಹೊಂಚು ಹಾಕಿ ಕರೆಕ್ಟ್ ಟೈಮ್‌ಗೆ ಹಿಡಿಯುತ್ತವೆ” ಎಂಬ ಹೇಳಿಕೆ ಪಕ್ಷಿಪ್ರೇಮಿಗಳು ಹಾಗೂ ರಣಹದ್ದು ಸಂರಕ್ಷಣಾ ಟ್ರಸ್ಟ್ ಸದಸ್ಯರನ್ನು ಆಕ್ರೋಶಕ್ಕೆ ಒಳಪಡಿಸಿದೆ. ಈ ಹೇಳಿಕೆ ರಣಹದ್ದುಗಳ ಸ್ವಭಾವದ ಕುರಿತು ತಪ್ಪು ಸಂದೇಶ ನೀಡುತ್ತದೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪಕ್ಷಿಪ್ರೇಮಿಗಳು ಹಾಗೂ ರಣಹದ್ದು ಸಂರಕ್ಷಣಾ ಟ್ರಸ್ಟ್ ವತಿಯಿಂದ ಬೆಂಗಳೂರು ದಕ್ಷಿಣ ವಿಭಾಗದ ಅರಣ್ಯಾಧಿಕಾರಿ (DFO) ರಾಮಕೃಷ್ಣಪ್ಪ ಅವರಿಗೆ ಅಧಿಕೃತ ದೂರು ನೀಡಲಾಗಿದೆ.
ಹದ್ದುಗಳ ಹಾಗೂ ರಣಹದ್ದುಗಳ ಬಗ್ಗೆ ವೈಜ್ಞಾನಿಕ ಹಾಗೂ ನಿಖರ ಮಾಹಿತಿಯನ್ನು ವೀಕ್ಷಕರಿಗೆ ತಿಳಿಸಬೇಕು. ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವಾಗ ಜವಾಬ್ದಾರಿಯಿಂದ ವರ್ತಿಸಬೇಕು ಎಂಬ ಆಗ್ರಹವನ್ನು ದೂರುದಾರರು ಮುಂದಿಟ್ಟಿದ್ದಾರೆ.

