ನವದೆಹಲಿ: ಮುಂಬರುವ ರಾಜ್ಯಸಭೆ ಚುನಾವಣೆಗೆ ವಿವಿಧ ರಾಜ್ಯಗಳಿಂದ ಸ್ಪರ್ಧಿಸಲಿರುವ ಆರು ಅಭ್ಯರ್ಥಿಗಳ ಹೆಸರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಕಟಿಸಿದೆ. ಘೋಷಿತ ಪಟ್ಟಿಯಲ್ಲಿ ತೆಲಂಗಾಣದಿಂದ ಇಬ್ಬರು, ಛತ್ತೀಸ್‌ಗಢ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದ ತಲಾ ಒಬ್ಬರು ಅಭ್ಯರ್ಥಿಗಳು ಸೇರಿದ್ದಾರೆ.
ಅಭ್ಯರ್ಥಿಗಳ ಪಟ್ಟಿಯಲ್ಲಿ ತೆಲಂಗಾಣದಿಂದ ಅಭಿಷೇಕ್ ಮನು ಸಿಂಗ್ವಿ ಮತ್ತು ವೆಮ್ ನರೇಂದರ್ ರೆಡ್ಡಿ, ಛತ್ತೀಸ್‌ಗಢದಿಂದ ಫುಲೋ ದೇವಿ ನೇತಮ್, ಹರಿಯಾಣದಿಂದ ಕರಮ್‌ವೀರ್ ಸಿಂಗ್ ಬೌಧ್, ಹಿಮಾಚಲ ಪ್ರದೇಶದಿಂದ ಅನುರಾಗ್ ಶರ್ಮಾ ಮತ್ತು ತಮಿಳುನಾಡಿನಿಂದ ಎಂ ಕ್ರಿಸ್ಟೋಫರ್ ತಿಲಕ್ ಹೆಸರುಗಳು ಒಳಗೊಂಡಿವೆ.
ಈ ಅಭ್ಯರ್ಥಿಗಳ ಪಟ್ಟಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದನೆ ನೀಡಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಚುನಾವಣಾ ಆಯೋಗದ ಪ್ರಕಟಣೆ ಪ್ರಕಾರ ರಾಜ್ಯಸಭೆಯ ಒಟ್ಟು 37 ಸ್ಥಾನಗಳಿಗೆ ಮಾರ್ಚ್ 16ರಂದು ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ತಮಿಳುನಾಡು, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಮತದಾನ ನಡೆಯಲಿದೆ.
ರಾಜ್ಯವಾರು ಖಾಲಿ ಸ್ಥಾನಗಳ ವಿವರಕ್ಕೆ ಬಂದರೆ, ಮಹಾರಾಷ್ಟ್ರದಲ್ಲಿ 7, ತಮಿಳುನಾಡಿನಲ್ಲಿ 6 ಸ್ಥಾನಗಳು ಹಾಗೂ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ತಲಾ 6 ಸ್ಥಾನಗಳು ಖಾಲಿಯಾಗಲಿವೆ. ಒಡಿಶಾದಲ್ಲಿ 4 ಸ್ಥಾನಗಳು, ಅಸ್ಸಾಂನಲ್ಲಿ 3 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ತೆಲಂಗಾಣ, ಛತ್ತೀಸ್‌ಗಢ ಮತ್ತು ಹರಿಯಾಣದಲ್ಲಿ ತಲಾ 2 ಸ್ಥಾನಗಳಿಗೆ ಹಾಗೂ ಹಿಮಾಚಲ ಪ್ರದೇಶದಲ್ಲಿ 1 ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

