ನವದೆಹಲಿ, ಜ.6: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಮಂಗಳವಾರ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಪ್ರಸ್ತುತ ಎದೆ ತಜ್ಞ ವೈದ್ಯರ ವೀಕ್ಷಣೆಯಲ್ಲಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
79 ವರ್ಷದ ಸೋನಿಯಾ ಗಾಂಧಿ ಅವರು ದೀರ್ಘಕಾಲದಿಂದ ಕೆಮ್ಮಿನ ಸಮಸ್ಯೆ ಎದುರಿಸುತ್ತಿದ್ದು, ನಗರದಲ್ಲಿ ಹೆಚ್ಚಿದ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ನಿಯಮಿತ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಭೇಟಿ ನೀಡುತ್ತಿರುತ್ತಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇತ್ತೀಚಿನ ವರ್ಷಗಳಲ್ಲಿ ಸೋನಿಯಾ ಗಾಂಧಿ ಆರೋಗ್ಯ ಸಂಬಂಧಿತ ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಹೊಟ್ಟೆ ಸಂಬಂಧಿತ ಸಮಸ್ಯೆಯಿಂದಾಗಿ ಅವರನ್ನು ಇದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆಬ್ರವರಿಯಲ್ಲಿ ಚಿಕಿತ್ಸೆ ಪಡೆದ ಅವರು ಆ ವೇಳೆ ಗ್ಯಾಸ್ಟ್ರೋಎಂಟರಾಲಜಿ ತಜ್ಞರ ಮೇಲ್ವಿಚಾರಣೆಯಲ್ಲಿದ್ದರು.
ಕಳೆದ ವರ್ಷ ಜೂನ್ 19ರಂದು ಹೊಟ್ಟೆ ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ಪಡೆದ ನಂತರ ಅವರನ್ನು ಸರ್ ಗಂಗಾ ರಾಮ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ನಾಲ್ಕು ದಿನಗಳ ಕಾಲ ತೀವ್ರ ವೈದ್ಯಕೀಯ ನಿಗಾ ವಹಿಸಲಾಗಿತ್ತು.
ಇದಲ್ಲದೆ, ಸೆಪ್ಟೆಂಬರ್ 2022ರಲ್ಲಿ ವೈದ್ಯಕೀಯ ತಪಾಸಣೆಗಾಗಿ ಸೋನಿಯಾ ಗಾಂಧಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದರು. ಆ ವೇಳೆ ಅವರ ಪುತ್ರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಜೊತೆಯಲ್ಲಿದ್ದರು ಎಂದು ವರದಿಯಾಗಿದೆ.

