ಬೆಳಗಾವಿ, ಜ. 21: ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ತುಂಬಿದೆ. ಹೀಗಾಗಿ ಕಳೆದ ಡಿಸೆಂಬರ್ 26 ಮತ್ತು 27ರಂದು ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶ ಆಯೋಜಿಸಲಾಗಿತ್ತು. ಆದರೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನಿಧನರಾದ ಕಾರಣ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿತ್ತು. ಈಗ ಆ ದಿನದ ಕಾರ್ಯಕ್ರಮ ಮತ್ತೆ ಆಯೋಜಿಸಲಾಗಿದ್ದು ಇಂದು . ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಹೆಸರಿನಲ್ಲಿ ಸಮಾವೇಶ ನಡೆಯಿತು.
ಸಮಾರಂಭದಲ್ಲಿ ಕಾಂಗ್ರೆಸ್ ನಾಯಕಿ, ಲೋಕಸಭೆ ಸದಸ್ಯೆ ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪಾಲ್ಗೊಂಡಿದ್ದರು.
27 ಅಡಿ ಎತ್ತರದ ಗಾಂಧಿ ಪ್ರತಿಮೆ ಅನಾವರಣ :
ಬೆಂಗಳೂರಿನ ವಿಧಾನಸೌಧದ ಮುಂದಿರುವಂತೆಯೇ ಬೆಳಗಾವಿಯ ಸುವರ್ಣಸೌಧದ ಆವರಣದಲ್ಲೂ ಸುಮಾರು 27 ಅಡಿ ಎತ್ತರದ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಇಂದು ಅನಾವರಣಗೊಳಿಸಲಾಯಿತು.

ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಚರಕವನ್ನು ತಿರುಗಿಸುವ ಮೂಲಕ ಸುವರ್ಣಸೌಧದ ಮುಂದೆ ಸ್ಥಾಪಿಸಲಾಗಿರುವ ಮಹಾತಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇದೇ ವೇಳೆ ಬಣ್ಣದೋಕುಳಿಗಳ ಸಿಡಿಮದ್ದಿನ ಪ್ರದರ್ಶನ ಆಕರ್ಷಣೀಯವಾಗಿತ್ತು.
ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ನಿರ್ಮಿಸಿರುವ ಮಾದರಿಯಲ್ಲೇ ಸುವರ್ಣ ಸೌಧದ ಆವರಣದಲ್ಲೂ ಗಾಂಧಿ ಪ್ರತಿಮೆ ನಿರ್ಮಿಸಲಾಗಿದ್ದು, ನನ್ನ ಜೀವನವೇ ನನ್ನ ಸಂದೇಶ ಎಂಬ ಒಕ್ಕಣಿಯನ್ನು ಅಳವಡಿಸಲಾಗಿದೆ.
ನೆಲಮಟ್ಟದಿಂದ 37 ಅಡಿ ಎತ್ತರದಲ್ಲಿ ಗಾಂಧಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ 20 ಟನ್ ಕಂಚು ಬಳಸಿ 27 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಇದೇ ವೇಳೆ ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನಾನಿಸಿದರು.
*ಸಂವಿಧಾನ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ: ಮಲ್ಲಿಕಾರ್ಜುನ ಖರ್ಗೆ
ಬೆಳಗಾವಿ: ‘ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ಇರದಿದ್ದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು. ಗಾಂಧೀಜಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು. ಸ್ವಾತಂತ್ರ್ಯದ ನಂತರದಲ್ಲಿ ಜವಾಹರಲಾಲ್ ನೆಹರು ಮತ್ತು ಅಂಬೇಡ್ಕರ್ ಸಂವಿಧಾನ ನೀಡಿದರು. ಸಂವಿಧಾನ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಸುವರ್ಣ ವಿಧಾನಸೌಧ ಆವರಣದಲ್ಲಿ ಪ್ರತಿಷ್ಠಾಪಿಸಿದ ಗಾಂಧಿ ಪ್ರತಿಮೆಯನ್ನು ಮಂಗಳವಾರ ಚರಕ ತಿರುಗಿಸುವ ಮೂಲಕ ಅನಾವರಣಗೊಳಿಸಿ ಅವರು ಮಾತನಾಡಿದರು.
‘ಗಾಂಧೀಜಿ ತಮ್ಮ ಬದುಕಿನಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಬೆಳಗಾವಿಯಲ್ಲಿ ಮಾತ್ರ. ಈಗ ಸೌಧದ ಆವರಣದಲ್ಲಿ ಗಾಂಧೀಜಿ ಪ್ರತಿಮೆ ಪ್ರತಿಷ್ಠಾಪನೆ ಮೂಲಕ ಬೆಳಗಾವಿಗೆ ಮಾತ್ರವಲ್ಲ; ಇಡೀ ರಾಜ್ಯಕ್ಕೆ ಗೌರವ ತರುವ ಕೆಲಸವಾಗಿದೆ. ದೇಶಕ್ಕೆ ಗಾಂಧಿ ಮಾಡಿರುವ ಸಾಧನೆಗಳು, ತ್ಯಾಗಗಳು ಮತ್ತು ಅವರ ಕೊಡುಗೆಗಳ ಬಗ್ಗೆ ಮಾತನಾಡಲು ನಾವು ಹೆಚ್ಚು ಸಮಯ ನೀಡಬೇಕಿದೆ’ ಎಂದರು.
‘ಇಂದು ಜಗತ್ತಿನಾದ್ಯಂತ ನಾಯಕರು ಮಹಾತ್ಮ ಗಾಂಧಿ ಅವರ ಕೊಡುಗೆಗಳನ್ನು ಸ್ಮರಿಸುತ್ತಿದ್ದಾರೆ. ನಮ್ಮ ಸಂವಿಧಾನ ಮತ್ತು ಅದರ ಜವಾಬ್ದಾರಿಗಳನ್ನು ಪ್ರತಿಯೊಬ್ಬರೂ ರಕ್ಷಿಸುವ ಕೆಲಸವಾಗಬೇಕಿದೆ’ ಎಂದು ಹೇಳಿದರು.
‘ಬೆಳಗಾವಿಯ ಅಧಿವೇಶನದಲ್ಲಿ ಗಾಂಧಿ ಅವರು, ಮಹಿಳಾ ಸಬಲೀಕರಣ, ಅಸ್ಪೃಶ್ಯತೆ ನಿವಾರಣೆಯಂಥ ಸಂದೇಶಗಳನ್ನು ನೀಡಿದ್ದರು. ಸ್ವಾತಂತ್ರ್ಯ ಚಳುವಳಿಗೆ ಹೊಸ ದಿಕ್ಕು ತೋರಿದ್ದರು. ಅವರು ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಸ್ಥಳದಲ್ಲೇ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯ ವಿಸ್ತೃತ ಸಭೆ ನಡೆಸಿದ್ದೆವು. ಈಗ ಬೆಳಗಾವಿಯಲ್ಲೇ ಪ್ರತಿಮೆ ಅನಾವರಣಗೊಳಿಸುತ್ತಿರುವುದು ಖುಷಿ ತಂದಿದೆ’ ಎಂದು ಹೇಳಿದರು.
‘ಉತ್ತರ ಪ್ರದೇಶದ ನೋಯ್ಡಾದಲ್ಲಿ ಪ್ರತಿಮೆ ಪ್ರತಿಷ್ಠಾಪನೆಗೆ ಬಯಸುತ್ತಿರುವ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಇಬ್ಬರು ಮಕ್ಕಳೊಂದಿಗೆ ಮಹಾತ್ಮ ಗಾಂಧಿ ನಿಂತಿರುವ ಚಿತ್ರ ಇಷ್ಟಪಟ್ಟಿದ್ದಾರೆ. ಅಂಥದ್ದೇ ಪ್ರತಿಮೆಯನ್ನು ಕಲಬುರಗಿಯಲ್ಲಿ ಸಹ ಪ್ರತಿಷ್ಠಾಪಿಸಲಾಗುವುದು’ ಎಂದರು.
*ಆರ್ಎಸ್ಎಸ್ ಸಿದ್ಧಾಂತವನ್ನು ಬಿಜೆಪಿ ಭಾರತೀಯರ ಮೇಲೆ ಹೇರುತ್ತಿದೆ ; ಸಿಎಂ ಸಿದ್ದರಾಮಯ್ಯ
ಬೆಳಗಾವಿ: ಸಂವಿಧಾನ ದ್ವೇಷಿಯಾಗಿರುವ ಆರ್.ಎಸ್.ಎಸ್ ಸಿದ್ಧಾಂತವನ್ನು ಬಿಜೆಪಿ ಭಾರತೀಯರ ಮೇಲೆ ಹೇರುತ್ತಿದ್ದು, ಇದನ್ನು ಹಿಮ್ಮೆಟ್ಟಿಸೋಣ. ಬಿಜೆಪಿ ಪರಿವಾರ ಭಾರತದಲ್ಲಿ ಬಹಳ ವ್ಯವಸ್ಥಿತವಾಗಿ ಒಡಕು ತರುತ್ತಿದೆ. ಭಾರತೀಯರ ನಡುವೆ ಬಿರುಕು ಮೂಡಿಸುತ್ತಾ ಭಾರತವನ್ನು ದುರ್ಬಲಗೊಳಿಸುತ್ತಿದೆ.
ಬಿಜೆಪಿಯ ಈ ಪ್ರಯತ್ನವನ್ನು ನಾವು ಸೋಲಿಸಬೇಕು. ಇದಕ್ಕೆ ಗಾಂಧಿ-ಅಂಬೇಡ್ಕರ್ ನಮಗೆ ಮಾರ್ಗದರ್ಶಕರು. ಸಂವಿಧಾನ ಜಾರಿಯಾದಾಗ ಬಿಜೆಪಿ ಪರಿವಾರ ಅಂಬೇಡ್ಕರ್ ಭಾವಚಿತ್ರವನ್ನು, ಸಂವಿಧಾನವನ್ನು ಸುಟ್ಟಿತ್ತು. ಇದನ್ನು ಈ ದೇಶ, ದೇಶದ ಜನ ಸಮುದಾಯ ಯಾವತ್ತೂ ಕ್ಷಮಿಸುವುದಿಲ್ಲ, ಮರೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯ ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ನಮ್ಮ ಸರ್ಕಾರ ಬಂದಮೇಲೆ 5 ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಅದಕ್ಕಾಗಿ ಬಜೆಟ್ನಲ್ಲಿ 55 ಸಾವಿರ ಕೋಟಿ ರೂ. ಹಣ ತೆಗೆದಿಟ್ಟಿದ್ದೇವೆ. ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿಯವರು ಟೀಕೆ ಮಾಡಿದರು. ಆದರೆ, ನೇರವಾಗಿ ಜನರಿಗೆ ಗ್ಯಾರಂಟಿ ಯೋಜನೆ ತಲುಪಿಸಿದ್ದೇವೆ. ಅಭಿವೃದ್ಧಿಗೆ ನಾವು ಹಣವನ್ನ ಕೊಟ್ಟಿದ್ದೇವೆ. ಕಾಂಗ್ರೆಸ್ ಗಾಂಧಿಯವರ ಹಿಂದುತ್ವದಲ್ಲಿ ನಂಬಿಕೆ ಇಟ್ಟಿದೆ. ಬಿಜೆಪಿ ಯಾವಾಗಲೂ ಮಹಾತ್ಮ ಗಾಂಧಿಯನ್ನು ‘ಹಿಂದೂ ವಿರೋಧಿ’ ಎಂದು ಬಿಂಬಿಸುತ್ತಿತ್ತು. ಆದರೆ ಅದು ನೂರಕ್ಕೆ ನೂರು ಸುಳ್ಳು ಎಂದು ಸಿದ್ದರಾಮಯ್ಯ ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಮಹಾತ್ಮ ಗಾಂಧಿಯವರ ಪ್ರತಿಮೆಯ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಹೇಳಿದರು.
ಹಲವು ಭಾಷೆ, ಹಲವು ಜಾತಿ, ಹಲವು ಧರ್ಮ ಭಾರತದ ಶಕ್ತಿ. ಬಿಜೆಪಿ ಪರಿವಾರ ಗಾಂಧಿ, ಅಂಬೇಡ್ಕರ್ ಅವರನ್ನು ದ್ವೇಷಿಸುತ್ತದೆ. ನಾವು ಇಬ್ಬರ ಆಶಯಗಳನ್ನೂ ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತೇವೆ, ವಿಸ್ತರಿಸುತ್ತೇವೆ. ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮೆಲ್ಲರನ್ನೂ ರಕ್ಷಿಸುತ್ತದೆ. ನಮಗೆ ಚುನಾವಣೆ ಗೆಲ್ಲುವುದಕ್ಕಿಂತ ನಮ್ಮ ಸಿದ್ಧಾಂತ ಗೆಲ್ಲಬೇಕು. ಅದು ಮಾತ್ರ ನಮ್ಮ ನಿಜವಾದ ಗೆಲುವು. ಗಾಂಧಿ-ಅಂಬೇಡ್ಕರ್ ಅವರ ಆಶಯಗಳು, ಮೌಲ್ಯಗಳ ಈಡೇರಿಕೆಗೆ ನಾವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದ್ದೇವೆ. ಇದಕ್ಕಾಗಿ ಬಜೆಟ್ನಲ್ಲಿ 52 ಸಾವಿರ ಕೋಟಿಗೂ ಅಧಿಕ ಮೊತ್ತದ ಹಣವನ್ನು ನೇರವಾಗಿ ಜನರ ಖಾತೆಗೆ ಹಾಕಿ ರಾಜ್ಯದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗ್ಯಾರಂಟಿಗಳ ಜೊತೆಗೆ ನಾವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ಕಾಂಗ್ರೆಸ್ಗೆ ಮಾತ್ರ ಎಲ್ಲ ಧರ್ಮಗಳನ್ನು ಕೊಂಡೊಯ್ಯುವ ಶಕ್ತಿ ಇದೆ. ನಾವು ದ್ವೇಷಿಸುವ ಕೆಲಸ ಮಾಡಲ್ಲ, ಪರಸ್ಪರ ಪ್ರೀತಿಸುವ ಕೆಲಸ ಮಾಡುತ್ತದೆ. ಪ್ರಜಾಪ್ರಭುತ್ವದ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ. ನಮ್ಮ ಸಿದ್ಧಾಂತ ಗೆದ್ದರೇ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಹಿಂದೂಗಳು, ಮುಸ್ಲಿಮರು ಒಟ್ಟಾಗಿ ಹೋಗಬೇಕಿದೆ ಎಂದು ಗಾಂಧಿ ಭಾರತ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಆರ್ಎಸ್ಎಸ್ ಸಿದ್ಧಾಂತಗಳ ವಿರುದ್ಧ ಹೋರಾಟ ಮಾಡುವುದು ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರ ಕರ್ತವ್ಯ. ಆರ್ಎಸ್ಎಸ್ ಸಿದ್ದಾಂತವೇ ಬಿಜೆಪಿ ಸಿದ್ದಾಂತ. ಅವರ ಸಿದ್ದಾಂತ ಒಡಕು ತಾರತಮ್ಯವಾಗಿದೆ. ಇದನ್ನು ದೇಶದಲ್ಲಿ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಇವರ ಸಿದ್ದಾಂತವನ್ನು ಗಾಂಧೀಜಿ ಅಂಬೇಡ್ಕರ್ ಮಾಡುತ್ತಿದ್ದ ಕಾರಣ ಅವರನ್ನು ಬಿಜೆಪಿ ವಿರೋಧಿಸಿಕೊಂಡು ಬಂದಿದೆ. ನಮ್ಮದು ಭಾತೃತ್ವ ದೇಶ. ಎಲ್ಲರನ್ನು ಮನುಷ್ಯರನ್ನಾಗಿ ಕಾಣಬೇಕಿರೋದು ಅವಶ್ಯ. ಬಿಜೆಪಿ ಗಾಂಧಿ ಹಾಗೂ ಅಂಬೇಡ್ಕರ್ ಅವರನ್ನು ವಿರೋಧ ಮಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈಗೀಗ ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿಯವರು ಬಹಳ ಪ್ರೀತಿ ತೋರಿಸುತ್ತಿದ್ದಾರೆ. ಅವರು ಯಾವಾಗಲೂ ಅಂಬೇಡ್ಕರ್ ವಿರೋಧಿಗಳು. ನಾವು ಸಂವಿಧಾನ ರಕ್ಷಣೆ ಮಾಡಿದರೆ ಸಂವಿಧಾನ ನಮ್ಮನ್ನ ರಕ್ಷಣೆ ಮಾಡುತ್ತದೆ. ಸಂವಿಧಾನ ಜಾರಿಗೆ ಬಂದಾಗಲೇ ವಿರೋಧ ಮಾಡಿದರು. ಗೋನವಾಳಕರ, ಸಾವರ್ಕರ್ ಕೂಡ ಇದನ್ನ ವಿರೋಧಿಸಿದ್ದರು. ಗಾಂಧೀಜಿ, ಅಂಬೇಡ್ಕರ್, ನೆಹರು ಅವರ ಪ್ರತಿಮೆಯನ್ನ ದಹನ ಮಾಡಿದ್ದರು. ದೇಶದ ಎಲ್ಲಾ ಜನರಿಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸ್ವಾತಂತ್ರ್ಯ ಸಿಕ್ಕಂತೆ. ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಸಿಎಂ ಹೇಳಿದ್ದಾರೆ.