ನವದೆಹಲಿ, ಮಾರ್ಚ್ 22: ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ದೊಡ್ಡ ಶಾಕ್ ನೀಡಿದೆ. ದೇಶೀಯ ವಿಮಾನ ಪ್ರಯಾಣದ ದರಗಳ ಮೇಲೆ ಹೇರಲಾಗಿದ್ದ ಗರಿಷ್ಠ ಮತ್ತು ಕನಿಷ್ಠ ಮಿತಿಯನ್ನು (Airfare Cap) ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅಧಿಕೃತವಾಗಿ ತೆರವುಗೊಳಿಸಿದೆ.
ಸರ್ಕಾರದ ಈ ನಿರ್ಧಾರದಿಂದ ಮುಂಬರುವ ದಿನಗಳಲ್ಲಿ ವಿಮಾನ ಟಿಕೆಟ್ ದರಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಇತನಕ ವಿಮಾನಯಾನ ಸಂಸ್ಥೆಗಳು ಸರ್ಕಾರ ನಿಗದಿಪಡಿಸಿದ ಮಿತಿಯೊಳಗೆ ಟಿಕೆಟ್ ದರವನ್ನು ಇಡಬೇಕಾಗಿತ್ತು. ಆದರೆ ಇನ್ನು ಮುಂದೆ ಬೇಡಿಕೆ-ಪೂರೈಕೆಗೆ ಅನುಗುಣವಾಗಿ ವಿಮಾನಯಾನ ಸಂಸ್ಥೆಗಳೇ ದರ ನಿಗದಿಪಡಿಸಲಿವೆ.
ವಾರಾಂತ್ಯಗಳು, ಹಬ್ಬದ ಸೀಸನ್ ಹಾಗೂ ರಜಾ ದಿನಗಳಲ್ಲಿ ಟಿಕೆಟ್ ದರಗಳು ದುಪ್ಪಟ್ಟಾಗುವ ಆತಂಕ ಎದುರಾಗಿದೆ. ವಿಶೇಷವಾಗಿ ಕೊನೆಯ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಹೆಚ್ಚಿನ ದರ ಪಾವತಿಸುವ ಪರಿಸ್ಥಿತಿ ಉಂಟಾಗಲಿದೆ.
ವಿಮಾನ ಇಂಧನ (ATF) ಬೆಲೆಯಲ್ಲಿನ ನಿರಂತರ ಏರಿಕೆ ಮತ್ತು ವಿಮಾನಯಾನ ಸಂಸ್ಥೆಗಳ ಆರ್ಥಿಕ ನಷ್ಟವನ್ನು ಸಮತೋಲನಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆ ಹೆಚ್ಚಲು ಇದು ಸಹಕಾರಿ ಎನ್ನುವುದು ಸರ್ಕಾರದ ವಾದವಾಗಿದೆ.
ಇನ್ನೊಂದೆಡೆ, ಪಶ್ಚಿಮ ಏಷ್ಯಾದ ಯುದ್ಧದ ಪರಿಣಾಮವಾಗಿ ಈಗಾಗಲೇ ಅಂತರಾಷ್ಟ್ರೀಯ ವಿಮಾನ ದರಗಳು ಏರಿಕೆಯಾಗಿದೆ. ಇದೇ ರೀತಿಯಲ್ಲಿ ದೇಶೀಯ ಮಾರ್ಗಗಳಲ್ಲೂ ದರ ಏರಿಕೆಯಾಗಿದರೆ ಸಾಮಾನ್ಯ ವರ್ಗದ ಪ್ರಯಾಣಿಕರು ವಿಮಾನ ಪ್ರಯಾಣದಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

