ನವದೆಹಲಿ, ಫೆಬ್ರವರಿ 26: ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟರ್ Shikhar Dhawan ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ತಮ್ಮ ಗೆಳತಿ Sophie Shine ಅವರನ್ನು ಎರಡನೇ ಬಾರಿ ಸಂಭ್ರಮದಿಂದ ವಿವಾಹವಾದ ಧವನ್ ಅವರಿಗೆ ಮದುವೆಯ ಮೂರನೇ ದಿನವೇ ಕಾನೂನು ಸಂಬಂಧಿತ ದೊಡ್ಡ ಗುಡ್‌ನ್ಯೂಸ್ ಸಿಕ್ಕಿದೆ.
ದೆಹಲಿಯ ಪಟಿಯಾಲ ಹೌಸ್ ಫ್ಯಾಮಿಲಿ ಕೋರ್ಟ್ ಮಹತ್ವದ ಆದೇಶ ಹೊರಡಿಸಿ, ಧವನ್ ಅವರ ಮಾಜಿ ಪತ್ನಿ Ayesha Mukherjee ಅವರು ಸುಮಾರು ₹5.72 ಕೋಟಿ ಮೊತ್ತವನ್ನು ಹಿಂದಿರುಗಿಸಬೇಕೆಂದು ಸೂಚಿಸಿದೆ. ಈ ಆದೇಶವು ದೀರ್ಘಕಾಲದಿಂದ ಮುಂದುವರಿದಿದ್ದ ಆಸ್ತಿ ವಿವಾದಕ್ಕೆ ಮಹತ್ವದ ತಿರುವು ನೀಡಿದೆ.
ಧವನ್ ಮತ್ತು ಆಸ್ಟ್ರೇಲಿಯನ್ ಮೂಲದ ಆಯೇಷಾ ಮುಖರ್ಜಿ 2012ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಜೋರಾವರ್ ಧವನ್ ಎಂಬ ಮಗನಿದ್ದಾರೆ. ಆಯೇಷಾ ಅವರ ಮೊದಲ ವಿವಾಹದಿಂದ ರಿಯಾ ಮತ್ತು ಆಲಿಯಾ ಎಂಬ ಇಬ್ಬರು ಪುತ್ರಿಯರು ಇದ್ದಾರೆ. ಆದರೆ ವೈವಾಹಿಕ ಜೀವನದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ 2023ರ ಅಕ್ಟೋಬರ್‌ನಲ್ಲಿ ದೆಹಲಿ ನ್ಯಾಯಾಲಯ ಇವರಿಬ್ಬರಿಗೆ ವಿಚ್ಛೇದನ ಮಂಜೂರು ಮಾಡಿತ್ತು.
ವಿಚ್ಛೇದನದ ಬಳಿಕ 2024ರ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾದ ಕುಟುಂಬ ನ್ಯಾಯಾಲಯ “ಇಂಟರಿಮ್ ಪ್ರಾಪರ್ಟಿ ಸೆಟಲ್‌ಮೆಂಟ್” ಆದೇಶ ನೀಡಿ, ಆಸ್ಟ್ರೇಲಿಯಾದಲ್ಲಿ ಮಾರಾಟವಾದ ಆಸ್ತಿಗಳಿಂದ ಬಂದ ಹಣದಲ್ಲಿ ಒಂದು ಭಾಗವನ್ನು ಆಯೇಷಾಗೆ ನೀಡಬೇಕೆಂದು ಧವನ್ ಅವರಿಗೆ ಸೂಚಿಸಿತ್ತು. ಆ ಆದೇಶದಂತೆ ಧವನ್ ಹಣ ಪಾವತಿಸಿರುವುದಾಗಿ ತಿಳಿದುಬಂದಿತ್ತು.
ಆದರೆ ಇದೀಗ ದೆಹಲಿ ಕೋರ್ಟ್ ಮಹತ್ವದ ತೀರ್ಪು ನೀಡಿ, ಆಸ್ಟ್ರೇಲಿಯಾ ನ್ಯಾಯಾಲಯದ ಆಸ್ತಿ ವಿತರಣಾ ಆದೇಶವು ಭಾರತೀಯ ಕಾನೂನು ಪ್ರಕಾರ ಮಾನ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರೊಂದಿಗೆ ಆಸ್ತಿ ವಿವಾದದ ಕುರಿತಾಗಿ ಹೊಸ ಕಾನೂನು ಸ್ಥಿತಿ ನಿರ್ಮಾಣವಾಗಿದ್ದು, ಈ ಬೆಳವಣಿಗೆ ಕ್ರೀಡಾ ಹಾಗೂ ಕಾನೂನು ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

