ನವದೆಹಲಿ: ಭಾರತೀಯ ಕಮ್ಯುನಿಷ್ಟ್ ಪಕ್ಷದ (ಮಾರ್ಕ್ಸ್ವಾದ) ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ನಾಯಕರಾದ ಸೀತಾರಾಂ ಯೆಚೂರಿ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಆಗಸ್ಟ್ 19ರಂದು ನ್ಯುಮೋನಿಯಾ ತರಹದ ಎದೆ ಸೋಂಕಿನ ಚಿಕಿತ್ಸೆಗಾಗಿ ಅವರನ್ನು ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ, ಅಗತ್ಯ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ವೆಂಟಿಲೇಟರ್ನಲ್ಲಿ ಇರಿಸಿದ್ದ ವೈದ್ಯರು, ಅವರ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಸಿಪಿಐ-ಎಂ ಹಿರಿಯ ನಾಯಕ ಸೀತಾರಾಮ್ ಯೆಚೂರಿ, ಅವರ ಇಚ್ಚೆಯಂತೆ ಅವರ ಕುಟುಂಬವು ದೇಹವನ್ನು ಬೋಧನೆ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾನ ಮಾಡಿದೆ.
2004 ರಲ್ಲಿ ಯುಪಿಎ ಸರ್ಕಾರವನ್ನು ರಚಿಸುವಲ್ಲಿ ಸೀತಾರಾಂ ಯೆಚೂರಿ ಮಹತ್ವದ ಪಾತ್ರವನ್ನು ವಹಿಸಿದರು. ಇತ್ತೀಚೆಗೆ 45 ಲ್ಯಾಟರಲ್ ಎಂಟ್ರಿ ಅಧಿಕಾರಿಗಳ ನೇಮಕ ಜಾಹೀರಾತು ಕುರಿತು ಕೇಂದ್ರ ಸರ್ಕಾರದ ವಿರುದ್ಧ ಯೆಚೂರಿ ತೀವ್ರ ಟೀಕೆ ಮಾಡಿದ್ದರು. ನಂತರ ಕೇಂದ್ರ ಸರ್ಕಾರ ಆ ಹುದ್ದೆಗಳ ಜಾಹೀರಾತನ್ನು ಹಿಂಪಡೆದಿತ್ತು.
ಸೀತಾರಾಂ ಯೆಚೂರಿ ಅವರು 2005ರಿಂದ 2017ರವರೆಗೆ 12 ವರ್ಷಗಳ ಕಾಲ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದರು. ಅವರು ಏಪ್ರಿಲ್ 19, 2015ರಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾದರು.
ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಸಿಎಂ ಚಂದ್ರಬಾಬು ನಾಯ್ಡು ಮುಂತಾದವರು ಸೀತಾರಾಂ ಯೆಚೂರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

