ಶ್ರೀನಗರ: ಸಾಮಾನ್ಯವಾಗಿ ಕ್ರಿಕೆಟ್ ಆಟಗಾರರು ತಮ್ಮ ದೇಶದ ಚಿಕ್ಕ ಬಾವುಟವನ್ನು ಹೆಲ್ಮೆಟ್ ಮೇಲೆ ಅಂಟಿಸಿಕೊಂಡು ಕಣಕ್ಕಿಳಿಯುವುದು ರೂಢಿಯಾಗಿದೆ. ಆದರೆ ಜಮ್ಮು–ಕಾಶ್ಮೀರ ಚಾಂಪಿಯನ್ಸ್ ಲೀಗ್‌ನಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ಆಟಗಾರನೊಬ್ಬ ಪ್ಯಾಲೆಸ್ಟೈನ್ ಧ್ವಜವಿರುವ ಹೆಲ್ಮೆಟ್ ಧರಿಸಿ ಬ್ಯಾಟಿಂಗ್ ನಡೆಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಈ ಸಂಬಂಧಿತ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿವಾದ ಭುಗಿಲೆದ್ದ ಬೆನ್ನಲ್ಲೇ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ಕ್ರಿಕೆಟಿಗನನ್ನು ಲೀಗ್‌ನಿಂದ ನಿಷೇಧಿಸಲಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ.
ವರದಿಗಳ ಪ್ರಕಾರ, ಪ್ಯಾಲೆಸ್ಟೈನ್ ಧ್ವಜವಿರುವ ಹೆಲ್ಮೆಟ್ ಧರಿಸಿದ್ದ ಆಟಗಾರನನ್ನು ಫರ್ಖಾನ್ ಭಟ್ ಎಂದು ಗುರುತಿಸಲಾಗಿದೆ. ಅವರು ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಈ ಹೆಲ್ಮೆಟ್ ಬಳಸಿದ್ದರು ಎನ್ನಲಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಹೆಚ್ಚಿನ ತನಿಖೆಗಾಗಿ ಕ್ರಿಕೆಟಿಗನನ್ನು ವಿಚಾರಣೆಗೆ ಕರೆಸಿದ್ದಾರೆ. ಆದರೆ ಈ ಕುರಿತು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಪೊಲೀಸರು ಬಿಡುಗಡೆ ಮಾಡಿಲ್ಲ. ಕ್ರಿಕೆಟಿಗನ ಕೃತ್ಯದ ಹಿಂದಿನ ನಿಖರ ಕಾರಣ ಹಾಗೂ ಉದ್ದೇಶವನ್ನು ತಿಳಿಯಲು ತನಿಖೆ ಮುಂದುವರಿದಿದೆ.
ಈ ವಿವಾದವು ಜಮ್ಮು ಮತ್ತು ಕಾಶ್ಮೀರ ಚಾಂಪಿಯನ್ಸ್ ಲೀಗ್‌ನ್ನೇ ತೀವ್ರ ಪರಿಶೀಲನೆಗೆ ಒಳಪಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ವಿಚಾರಣೆಯ ಭಾಗವಾಗಿ ಲೀಗ್ ಆಯೋಜಕ ಜಾಹಿದ್ ಭಟ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇದರ ನಡುವೆ, ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ (ಜೆಕೆಸಿಎ) ಈ ಪಂದ್ಯಾವಳಿಯೊಂದಿಗೆ ತನ್ನಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದೆ. ಲೀಗ್ ಜೆಕೆಸಿಎ ಬ್ಯಾನರ್ ಅಡಿಯಲ್ಲಿ ಆಯೋಜಿತವಾಗಿಲ್ಲ ಹಾಗೂ ಫರ್ಖಾನ್ ಭಟ್ ಕೂಡ ಅಸೋಸಿಯೇಷನ್ ಜೊತೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ ಎಂದು ಜೆಕೆಸಿಎ ತಿಳಿಸಿದೆ. ಲೀಗ್‌ನೊಂದಿಗೆ ಯಾವುದೇ ನಂಟಿಲ್ಲದ ಕಾರಣ ಈ ಪ್ರಕರಣದಲ್ಲಿ ಜೆಕೆಸಿಎ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದೂ ಹೇಳಿದೆ.

