ವಾಷಿಂಗ್ಟನ್, ನವೆಂಬರ್ 27: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿ ಯಲ್ಲಿ ಶ್ವೇತ ಭವನದ ಸಮೀಪ ಗುಂಡಿನ ದಾಳಿ ನಡೆದಿದ್ದು, ಇಬ್ಬರು ನ್ಯಾಷನಲ್ ಗಾರ್ಡ್ ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಬಳಿಕ ರಾಜಕೀಯ ವಲಯ, ಭದ್ರತಾ ವಲಯ ಎಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮೆಟ್ರೋಪಾಲಿಟನ್ ಪೊಲೀಸ್ ಮುಖ್ಯಸ್ಥ ಜೆಫ್ ಕ್ಯಾರೊಲ್ ಅವರು ನೀಡಿರುವ ಮಾಹಿತಿ ಪ್ರಕಾರ, ನ್ಯಾಷನಲ್ ಗಾರ್ಡ್ ಪಡೆಗಳು ನಿಯಮಿತ ಗಸ್ತು ತಿರುಗುತ್ತಿದ್ದಾಗ ದಾಳಿಕೋರ ಮೆಟ್ರೋ ನಿಲ್ದಾಣದ ಹತ್ತಿರದ ಒಂದು ಮೂಲೆಯಲ್ಲಿ ಹೊಂಚು ಹಾಕಿ ಕುಳಿತಿದ್ದಾನೆ. ಆಕಸ್ಮಿಕವಾಗಿ ಗುಂಡು ಹಾರಿಸಲಾಗಿದ್ದು, ಇಬ್ಬರು ಗಾರ್ಡ್ ಸದಸ್ಯರು ತಕ್ಷಣವೇ ನೆಲಕ್ಕುರುಳಿದ್ದಾರೆ.
ಘಟನೆಯ ಬಳಿಕ ಇತರ ಗಾರ್ಡ್ ಸದಸ್ಯರು ತಕ್ಷಣವೇ ಪ್ರತಿಕ್ರಿಯಿಸಿ ದಾಳಿಕೋರನನ್ನು ಸುತ್ತುವರೆದು ಬಂಧಿಸಿದ್ದಾರೆ. ಪ್ರಸ್ತುತ ಆತ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಗಾಯಗೊಂಡಿರುವ ಇಬ್ಬರು ಗಾರ್ಡ್‌ಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಮತ್ತು ವಾಷಿಂಗ್ಟನ್ ಮೇಯರ್ ಮುರಿಯಲ್ ಬೌಸರ್ ತಿಳಿಸಿದ್ದಾರೆ.
ಈ ದಾಳಿಯ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಫ್ಲೋರಿಡಾದಲ್ಲಿ ಮಾತನಾಡಿದ ಅವರು, “ಇದು ಭಯೋತ್ಪಾದನಾ ಕೃತ್ಯ, ಘೋರ, ದುಷ್ಟ, ದ್ವೇಷಪೂರ್ಣ ದಾಳಿ. ಇದಕ್ಕೆ ಕಾರಣರಾದವರು ತುಂಬಾ ದುಬಾರಿ ಬೆಲೆ ಪಾವತಿಸಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳು ಬಂಧನಕ್ಕೊಳಗಾದ ವ್ಯಕ್ತಿಯನ್ನು ರಹಮಾನಲ್ಲಾ ಲಕನ್ವಾಲ್ ಎಂದು ಗುರುತಿಸಿದ್ದು, ಆತ ಆಫ್ಘಾನಿಸ್ತಾನ ಮೂಲದವನು, 2021ರ ಸೆಪ್ಟೆಂಬರ್‌ನಲ್ಲಿ ಅಮೆರಿಕ ಪ್ರವೇಶಿಸಿದ್ದಾನೆಂಬ ಮಾಹಿತಿಯನ್ನು ಪತ್ತೆಹಚ್ಚಲಾಗಿದೆ. ದಾಳಿಯ ಹಿನ್ನೆಲೆ ಮತ್ತು ಉದ್ದೇಶದ ಬಗ್ಗೆ ತನಿಖೆ ಮುಂದುವರೆದಿದೆ.
ಆಗಸ್ಟ್ ತಿಂಗಳಿನಲ್ಲಿ 300 ಕ್ಕೂ ಹೆಚ್ಚು ವೆಸ್ಟ್ ವರ್ಜೀನಿಯಾ ನ್ಯಾಷನಲ್ ಗಾರ್ಡ್ ಸದಸ್ಯರನ್ನು ವಾಷಿಂಗ್ಟನ್‌ಗೆ ನಿಯೋಜಿಸಲಾಗಿತ್ತು. ಕಳೆದ ವಾರ ಇವರಲ್ಲಿ ಸುಮಾರು 160 ಮಂದಿ ತಮ್ಮ ಸೇವೆಯನ್ನು ವರ್ಷದ ಅಂತ್ಯದವರೆಗೆ ವಿಸ್ತರಿಸಿಕೊಳ್ಳಲು ಸಮ್ಮತಿಸಿದ್ದು, ಇತ್ತೀಚೆಗಷ್ಟೇ ಕೆಲವು ಸದಸ್ಯರು ತಮ್ಮ ರಾಜ್ಯಗಳಿಗೆ ಮರಳಿದ್ದರು.
ಟ್ರಂಪ್ ತಮ್ಮ ಟ್ರುತ್ ಸೋಷಿಯಲ್ ಪೋಸ್ಟ್‌ನಲ್ಲಿ, “ನಮ್ಮ ಮಹಾನ್ ನ್ಯಾಷನಲ್ ಗಾರ್ಡ್ ವೀರರಿಗೆ ಹಾಗೂ ಎಲ್ಲಾ ಸೈನಿಕರಿಗೆ ದೇವರು ಆಶೀರ್ವದಿಸಲಿ. ಅವರು ನಿಜವಾಗಿಯೂ ಮಹಾನ್ ಜನರು,” ಎಂದು ಬರೆದಿದ್ದಾರೆ.
ಗುಂಡಿನ ದಾಳಿಗಳ ಸರಣಿ ಅಮೆರಿಕದಲ್ಲಿ ಮತ್ತೊಮ್ಮೆ ಭದ್ರತಾ ಪರಿಸ್ಥಿತಿಯ ಬಗ್ಗೆ ಗಂಭೀರ ಚಿಂತನೆಗಳನ್ನು ವ್ಯಕ್ತಪಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಪ್ರಕಟಗೊಳ್ಳುವ ನಿರೀಕ್ಷೆಯಿದೆ.

