ಮೈಸೂರು: ಟಿಬೆಟಿಯನ್ನರ 14ನೇ ಧರ್ಮಗುರುಗಳಾದ ದಲೈ ಲಾಮಾ ಅವರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿರುವ ಟಿಬೆಟಿಯನ್ ನಿರಾಶ್ರಿತರ ಶಿಬಿರಕ್ಕೆ ಆಗಮಿಸಿದ್ದು, ಒಂದು ತಿಂಗಳ ಕಾಲ ಅವರು ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ದಲೈಲಾಮಾ ಅವರು ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಬೈಲಕುಪ್ಪೆಯ ನೂತನ ನಾಲ್ಕನೇ ಕ್ಯಾಂಪಿನಲ್ಲಿರುವ ಹೆಲಿಫ್ಯಾಡ್ ನಲ್ಲಿ ಬಂದಿಳಿದಿದ್ದಾರೆ. ದಲೈ ಲಾಮ ಅವರು ಆಗಮಿಸುತ್ತಿದ್ದಂತೆ 10 ಸಾವಿರಕ್ಕೂ ಹೆಚ್ಚು ಟಿಬೆಟಿಯನ್ನರು ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಿ 6 ಕಿ.ಮೀ ರಸ್ತೆಯುದ್ದಕ್ಕೂ ಸ್ವಾಗತ ಕೋರಿದ್ದಾರೆ.
ದಲೈ ಲಾಮಾ ಅವರಿಗೆ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗಿದ್ದು, ಸುಮಾರು 250 ಕ್ಕೂ ಹೆಚ್ಚು ಪೊಲೀಸರು ಭದ್ರತೆ ವ್ಯವಸ್ಥೆ ಕಲ್ಪಿಸಿದ್ದಾರೆ. ಹೆಲಿಪ್ಯಾಡ್‌ನಿಂದ ಇಳಿದ ದಲೈ ಲಾಮಾ ಕಾರಿನ ಮೂಲಕ ಲಕ್ಷ್ಮೀಪುರ ಗ್ರಾಮದಲ್ಲಿರುವ ತಶಿಲಾಂಪು ಬೌದ್ಧ ದೇವಸ್ಥಾನಕ್ಕೆ ತೆರಳಿದ್ದಾರೆ. ಬೌದ್ಧ ಬಿಕ್ಕುಗಳು ತಮ್ಮ ಗುರುಗಳಿಗೆ ದಾರಿಯುದ್ದಕ್ಕೂ ಹೂವಿನ ಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಇತ್ತೀಚೆಗೆ ದಲೈ ಲಾಮಾ ಅಮೆರಿಕದಲ್ಲಿ ಚಿಕಿತ್ಸೆ ಪಡೆದಿದ್ದು, ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ತಿಳಿಸಿದ್ದಾರೆ. ಹಿಮಾಚಲ ಪ್ರದೇಶದ ಧರ್ಮಶಾಲಾ ಟಿಬೆಟಿಯನ್ ಕೇಂದ್ರದಲ್ಲಿ ತೀವ್ರ ಚಳಿಯ ವಾತಾವರಣ ಇರುವ ಕಾರಣ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಗಾಗಿ ಅವರು ಬೈಲಕುಪ್ಪೆಗೆ ಆಗಮಿಸಿದ್ದಾರೆ. ಒಂದು ತಿಂಗಳುಗಳ ಕಾಲ ಅವರು ಇಲ್ಲಿಯೇ ವಿಶ್ರಾಂತಿ ಪಡೆಯಲಿದ್ದು, ಈ ಸಂದರ್ಭ ಯಾವುದೇ ಭೇಟಿ ಅಥವಾ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

