ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿರುವ ದರ್ಶನ್ ಅವರನ್ನು ತಾಯಿ ಮೀನಾ ತೂಗುದೀಪ, ಅಕ್ಕ ದಿವ್ಯ ಭೇಟಿಯಾಗಿ ಸಾಂತ್ವನ ಹೇಳಿದರು. ಇಂದು ಬೆಳಗ್ಗೆ ಜೈಲಿಗೆ ಆಗಮಿಸಿದ ಮೀನಾ, ದಿವ್ಯ ಜತೆಗೆ ದರ್ಶನ್ ಬಾವ ಮಂಜುನಾಥ, ಅಕ್ಕನ ಮಕ್ಕಳು ಸೇರಿ ಐದು ಜನ ಕುಟುಂಬಸ್ಥರು ಭೇಟಿಯಾದರು.
ತಾಯಿ, ಅಕ್ಕನ ಕಂಡು ದರ್ಶನ್ ಭಾವುಕರಾದರು. ಕುಟುಂಬಸ್ಥರು ಸಹ ದರ್ಶನ್ ಸ್ಥಿತಿ ಕಂಡು ಭಾವುಕರಾದರು. ಇದೇ ವೇಳೆ ತಂದಿದ್ದ ಬಟ್ಟೆ, ಬೇಕರಿ ತಿನಿಸುಗಳನ್ನು ದರ್ಶನ್ ಅವರಿಗೆ ನೀಡಲಾಯಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ದರ್ಶನ್ ಜೊತೆ ಅವರು ಮಾತುಕತೆ ನಡೆಸಿದರು.
ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಮೊದಲು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಜೈಲಿನಲ್ಲಿನ ಫೊಟೋ ವೈರಲಾದ ಬೆನ್ನಲ್ಲೇ ದರ್ಶನ್ ಸೇರಿ ಪ್ರಕರಣದ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಗೊಳಿಸಲಾಯಿತು.
ಬಳ್ಳಾರಿ ಜೈಲಿಗೆ ನಟ ದರ್ಶನ್ ಸ್ಥಳಾಂತರವಾದ ಬಳಿಕ ಮೊದಲ ಬಾರಿಗೆ ನಟ ದರ್ಶನ್ ಅವರನ್ನು ನೋಡಲು ತಾಯಿ, ಅಕ್ಕ ಬಂದಿದ್ದರು. ಈವರೆಗೂ ನಾಲ್ಕು ಬಾರಿ ಪತ್ನಿ ವಿಜಯಲಕ್ಷ್ಮಿ, ಇತ್ತೀಚಿಗೆ ನಟ ಧನ್ವೀರ್, ಆಪ್ತ ಹೇಮಂತ್ ಭೇಟಿ ನೀಡಿದ್ದರು.
ತಾಯಿಗಾಗಿ ನಿತ್ಯ ಜೈಲಿನಲ್ಲಿ ಕನವರಿಸುತ್ತಿದ್ದ ದರ್ಶನ್ಗೆ ತಾಯಿಯನ್ನು ಕಂಡು ಸಂತಸಗೊಂಡರು. ಈ ವೇಳೆ ತಾಯಿ ತಂದಿದ್ದ ಬೇಕರಿ ತಿನಿಸುಗಳು, ಮನೆಯಿಂದ ಮಾಡಿಕೊಂಡು ಬಂದಿದ್ದ ತಿನಿಸುಗಳು, ಹಣ್ಣುಗಳನ್ನು ನಟ ದರ್ಶನ್ಗೆ ಕೊಡಲಾಯಿತು.