ಬೆಂಗಳೂರು: ಹೆಬ್ಬಾಳದ ನೂತನ ಫ್ಲೈಓವರ್ ಮೇಲೆ ಡಿಯೋ ಓಡಿಸಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಿನ್ನೆ ಎಲ್ಲರ ಗಮನಸೆಳೆದಿದ್ದರು. ಆದರೆ ಇದೀಗ ಈ ಡಿಯೋ ಮೇಲೆ 18,500 ರೂ. ದಂಡ ಬಾಕಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಡಿಕೆಶಿ ಓಡಿಸಿದ್ದ KA04JZ2087 ನೋಂದಣಿ ಸಂಖ್ಯೆಯ ಡಿಯೋ ಸ್ಕೂಟರ್ ಮೇಲೆ ದಂಡ ವಿಧಿಸಲಾಗಿದೆ. 34 ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವುದಕ್ಕಾಗಿ 18,500 ರೂಪಾಯಿ ದಂಡ ವಿಧಿಸಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಡಿಸಿಎಂ ಅವರು ನಿನ್ನೆ ಬೆಳಗ್ಗೆ ಹೆಬ್ಬಾಳ ಬಳಿ ಬಿಡಿಎ ವತಿಯಿಂದ ನಿರ್ಮಾಣವಾಗುತ್ತಿರುವ ಹೊಸ ಮೇಲ್ಸೇತುವೆ ಕಾಮಗಾರಿಯನ್ನು ತಮ್ಮ ಅಧಿಕಾರಿಗಳೊಂದಿಗೆ ತೆರಳಿ ವೀಕ್ಷಿಸಿದರು. ಬಳಿಕ ಕಾರ್ಯಕರ್ತರೊಬ್ಬರ ಡಿಯೋದಲ್ಲಿ ಹೊಸ ಫೈಓವರ್ ಮೇಲೆ ಒಂದು ರೌಂಡ್ ಹೋಗಿ ಬರುವ ಮೂಲಕ ಎಲ್ಲರ ಗಮನಸೆಳೆದಿದ್ದರು.
ಡಿಕೆಶಿ ಹಿಂದೆಯೇ ಶಾಸಕ ಎನ್ ಹ್ಯಾರೀಸ್ ಕೂಡ ಸ್ಕೂಟರ್‌ನಲ್ಲಿ ರೌಂಡ್ ಹೊಡೆದಿದ್ದರು. ಡಿಕೆಶಿ ಹಾಫ್ ಹೆಲ್ಕೆಟ್ ಧರಿಸಿ ಗಾಡಿ ಓಡಿಸಿದ್ರೆ, ಹ್ಯಾರಿಸ್ ಹೆಲೈಟ್ ಹಾಕದೇ ಗಾಡಿ ಓಡಿಸಿದ್ದರು. ಇದಾದ ಬಳಿಕ ಈ ಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಇದರ ಮಾಲೀಕರು ಪದೇ ಪದೇ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಈ ವಿವಾದಾತ್ಮಕ ಸ್ಕೂಟರ್‌ನಲ್ಲಿಯೇ ಡಿಕೆ ಶಿವಕುಮಾರ್ ಸವಾರಿ ಮಾಡಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಡಿಕೆ ಶಿವಕುಮಾರ್ ಅವರು ವಾಹನದ ಹಿನ್ನೆಲೆಯನ್ನು ಪರಿಶೀಲಿಸದೇ ಡಿಯೋ ಓಡಿಸಿರುವುದನ್ನು ಇಲ್ಲಿ ನಾವು ಗಮನಿಸಬಹುದಾಗಿದೆ.

