ಬೆಂಗಳೂರು: ಧರ್ಮಸ್ಥಳ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಮಧ್ಯೆ, ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣ ಅಂತಿಮ ಘಟ್ಟಕ್ಕೆ ತಲುಪಿದಂತೆ ಗೋಚರಿಸುತ್ತಿದೆ. ದೂರುದಾರ ತೋರಿಸಿದ ಜಾಗಗಳಲ್ಲಿ ಅಸ್ಥಿಪಂಜರ ಸಿಗುತ್ತಿಲ್ಲ. ಇದರ ನಡುವೆ ಧರ್ಮಸ್ಥಳದ ವಿರುದ್ಧ ಬೇಕಂತಲೆ ಷಡ್ಯಂತ್ರ ನಡೆಸಿದೆ ಎಂಬ ಭಕ್ತರ ಅಸಮಾಧಾನದ ನಡುವೆಯೇ ಡಿಸಿಎಂ ಡಿಕೆ ಶಿವಕುಮಾರ್ ಅವರು, ವಿಧಾನಸಭೆಯಲ್ಲಿ ಮಾತನಾಡಿ, ಇದೊಂದು ಖಾಲಿ ಡಬ್ಬ, ಏನೂ ಇಲ್ಲ. ಅಲ್ಲಿ ಕೇವಲ ಸದ್ದು ಜಾಸ್ತಿ ಆಗುತ್ತಿದೆ. ಇದೊಂದು ದೊಡ್ಡ ಷಡ್ಯಂತ್ರ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬಹಳ ಷಡ್ಯಂತ್ರ ನಡೆದಿದೆ. ಯಾರು ಷಡ್ಯಂತ್ರ ಮಾಡಿದ್ದಾರೆ ಎಂದು ಈಗ ನಾನು ಹೇಳಲ್ಲ. ಬಹಳ ಯೋಜನೆ ಮಾಡಿ ಅವರ ಮೇಲೆ ಕಪ್ಪು ಚುಕ್ಕೆ ತರಲು ನೋಡುತ್ತಿದ್ದಾರೆ. ಯಾರನ್ನೋ ತೇಜೋವಧೆ ಮಾಡಿ ನೂರಾರು ವರ್ಷದಿಂದ ಬಂದ ಪರಂಪರೆಯನ್ನು ಹಾಳು ಮಾಡಲು ಹೊರಟಿದ್ದಾರೆ ಎಂದು ದೂರಿದರು.
ದೂರುದಾರನೊಬ್ಬ ನ್ಯಾಯಾಲಯಕ್ಕೆ ಹೋಗಿ ಹೇಳಿಕೆ ಕೊಟ್ಟಿದ್ದಾನೆ. ಹೀಗಾಗಿ ತನಿಖೆ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಧರ್ಮಸ್ಥಳದ ನೇತ್ರಾವತಿ ನದಿ ದಡದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ದೂರುದಾರ ಆರೋಪಿಸಿರುವುದರಿಂದ ಎಸ್ಐಟಿ ತಂಡ ಗುರುವಾರವೂ ಉತ್ಖನನ ಮುಂದುವರಿಸಿದೆ.
ಸ್ಥಳ ಸಂಖ್ಯೆ 13ರಲ್ಲಿ ನೂರಾರು ಶವ ಹೂತಿದ್ದಾಗಿ ದೂರುದಾರ ಹೇಳಿದ್ದ. ಆದರೆ ಎರಡು ದಿನಗಳ ಕಾಲ ನಡೆದ ಉತ್ಖನನ ವೇಳೆ ಯಾವುದೇ ರೀತಿಯ ಮಾನವ ಮೂಳೆಗಳು ಪತ್ತೆಯಾಗಿರಲಿಲ್ಲ. ಗುರುವಾರ ಸಾಕ್ಷಿದಾರ ಕನ್ಯಾಡಿ ಬಳಿ ಹೊಸ ಜಾಗವನ್ನು ತೋರಿಸಿದ್ದು, ಅಲ್ಲಿಯೂ ಎಸ್‌ಐಟಿ ಅಧಿಕಾರಿಗಳ ನೇತೃತ್ವದಲ್ಲಿ ಉತ್ಖನನ ಕಾರ್ಯ ನಡೆಸಲಾಗುತ್ತಿದೆ. ಈ ಮಧ್ಯೆ, 10ಕ್ಕೂ ಹೆಚ್ಚು ತೆಂಗಿನಸಸಿಗಳನ್ನು ತಂದ ಧರ್ಮಸ್ಥಳ ಭಕ್ತರ ಗುಂಪೊಂದು ಈಗಾಗಲೇ ತೋಡಿರುವ ಗುಂಡಿಗಳಲ್ಲಿ ನೆಡುವುದಾಗಿ ಹೇಳಿ ಪ್ರತಿಭಟನೆ ನಡೆಸಿತು.

