ಬೈರುತ್ : 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಹೆಜ್ಬೊಲ್ಲಾ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನವೂ ಹೆಚ್ಚುತ್ತಿದೆ. ಎರಡು ದಿನಗಳಲ್ಲಿ ವಾಕಿ-ಟಾಕಿಗಳು ಮತ್ತು ಪೇಜರ್ಗಳು ದಿಢೀರ್ ಸ್ಪೋಟಗೊಂಡ ಪರಿಣಾಮ ಮೃತರ ಸಂಖ್ಯೆ ಕನಿಷ್ಠ 32ಕ್ಕೆ ಏರಿಕೆ ಕಂಡಿದ್ದು, 3,250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಯಾವ ಕ್ಷಣದನ್ನಿ ಎಲ್ಲಿ ಏನು ಬ್ಲಾಸ್ಟ್ ಆಗುತ್ತೋ ಅನ್ನೋ ಭಯದಲ್ಲೇ ಬದುಕುತ್ತಿರುವ ಹಿಜ್ಬುಲ್ಲಾ ಉಗ್ರರು ಸೇಡು ತೀರಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಈ ಕ್ರಿಮಿನಲ್ ಆಕ್ರಮಣಕ್ಕೆ ಇಸ್ರೇಲ್ ಸಂಪೂರ್ಣ ಹೊಣೆಯಾಗಿದೆ. ಇದಕ್ಕೆ ಸೂಕ್ತ ಪ್ರತೀಕಾರ ತೀರಿಸಿ ಕೊಳ್ಳುವುದಾಗಿ ಹಿಜ್ಬುಲ್ಲಾ ಹೇಳಿದೆ.
ಪೇಜರ್, ವಾಕಿ-ಟಾಕಿ ಜತೆಗೆ ಬುಧವಾರದಿಂದ ಲೆಬನಾನ್ನಲ್ಲಿ ಸೋಲಾರ್ ಉಪಕರಣ ಗಳು ಕೂಡ ಸ್ಪೋಟಗೊಳ್ಳುತ್ತಿವೆ. ಮನೆ ಮೇಲಿನ ಛಾವಣಿ, ವಿವಿಧ ಸೌರ ವಿದ್ಯುತ್ ಉಪಕರಣಗಳು ದಿಢೀರ್ ಸ್ಫೋಟ ಗೊಳ್ಳುತ್ತಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಘಟನೆಯಲ್ಲಿ ಎಷ್ಟು ಜನರಿಗೆ ಗಾಯವಾಗಿದೆ? ಯಾರಾದರೂ ಮೃತಪಟ್ಟಿದ್ದಾರೆಯೇ? ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಬೇರುತ್ ಪಟ್ಟಣ ಸಹಿತ ಹಲವು ಪ್ರದೇಶಗಳ ಮನೆಗಳಲ್ಲಿ ಸ್ಪೋಟದಿಂದ ಹೊಗೆ ಬರುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವಿಮಾನದಲ್ಲಿ ಪೇಜರ್ ನಿಷೇಧ:
ಸ್ಪೋಟದ ಹಿನ್ನೆಲೆಯಲ್ಲಿ ಬೈರುತ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಎಲ್ಲಾ ವಿಮಾನಗಳಲ್ಲಿ ಪೇಜರ್ಗಳು ಮತ್ತು ವಾಕಿ-ಟಾಕಿಗಳನ್ನು ನಿಷೇಧಿಸಿ ಲೆಬನಾನ್ನ ನಾಗರಿಕ ವಿಮಾನಯಾನ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮುಂದಿನ ಸೂಚನೆವರೆಗೆ ವಿಮಾನಗಳಲ್ಲಿ ಪೇಜರ್ಗಳು ಮತ್ತು ವಾಕಿ-ಟಾಕಿ ಸಾಗಿಸುವುದನ್ನು ನಿಷೇಧಿಸಲಾಗಿದೆ. ಪ್ರಯಾಣಿಕರ ಬಳಿ ಅಂತಹ ಸಾಧನಗಳು ಕಂಡುಬಂದರೆ ಅದನ್ನು ವಶಪಡಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.