ಬೊಗೋಟಾ: ಕೊಲಂಬಿಯಾದಲ್ಲಿ ಭಾರೀ ವಿಮಾನ ದುರಂತ ಸಂಭವಿಸಿದ್ದು, 125 ಜನರನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಕನಿಷ್ಠ 66 ಮಂದಿ ಸಾವನ್ನಪ್ಪಿದ್ದಾರೆ.
ಲಾಕ್‌ಹೀಡ್ ಮಾರ್ಟಿನ್ ನಿರ್ಮಿತ ಹರ್ಕ್ಯುಲಸ್ ಸಿ-130 ವಿಮಾನವು ಪೆರು ಗಡಿಯಲ್ಲಿರುವ ಪೋರ್ಟೊ ಲೆಗುಯಿಜಾಮೊ ಪ್ರದೇಶದಿಂದ ಹಾರುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ತಿಳಿಸಿದ್ದಾರೆ.
ನಗರ ಕೇಂದ್ರದಿಂದ ಕೇವಲ 3 ಕಿ.ಮೀ ದೂರದಲ್ಲಿ ವಿಮಾನ ಪತನಗೊಂಡಿದ್ದು, ಭೀಕರ ಪರಿಣಾಮ ಉಂಟಾಗಿದೆ. ದುರಂತದಲ್ಲಿ 48 ಮಂದಿ ಗಾಯಗೊಂಡಿದ್ದು, ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವ ಕಾರ್ಯಾಚರಣೆ ಮುಂದುವರಿದಿದೆ.
ಈ ನಡುವೆ, ಅಧ್ಯಕ್ಷ ಗುಸ್ಟಾವೊ ಪೆಟ್ರೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ವಿಮಾನದಲ್ಲಿದ್ದ 40 ಕ್ಕೂ ಹೆಚ್ಚು ಜನರ ಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ. ಅಪಘಾತದ ನಿಖರ ಕಾರಣ ತಿಳಿಯಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

