ನವದೆಹಲಿ : ರಾಷ್ಟ್ರ ರಾಜಧಾನಿ ನವದೆಹಲಿಯ ವಿಧಾನಸಭಾ ಚುನಾವಣೆಗೆ ಆಯೋಗ ದಿನಾಂಕ ಘೋಷಣೆ ಮಾಡಿದೆ. ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಫೆ.5 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಫೆ 8 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಯ ಅವಧಿ ಫೆ.23ರಂದು ಅಂತ್ಯಗೊಳ್ಳಲಿದ್ದು, ಅದಕ್ಕೂ ಮೊದಲೇ ಚುನಾವಣೆ ನಡೆಯಬೇಕಾದ ಹಿನ್ನಲೆಯಲ್ಲಿ ಸೋಮವಾರ ಭಾರತೀಯ ಮುುುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕ ಪ್ರಕಟಿಸಿದರು.
ದೆಹಲಿಯಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳು 70. ಇವುಗಳಲ್ಲಿ ಸಾಮಾನ್ಯ 58, ಎಸ್ಸಿ 12. ಪ್ರಸ್ತುತ ಇರುವ ವಿಧಾನಸಭೆಯ ಅವಧಿ 23, 2025ರಂದು ಮುಕ್ತಾಯಗೊಳ್ಳಲಿದೆ. ಒಟ್ಟು ಮತಗಟ್ಟೆಗಳು 13,033. 2697 ಪ್ರದೇಶಗಳಲ್ಲಿ ಇವುಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಇವುಗಳಲ್ಲಿ ನಗರ ಪ್ರದೇಶ 13,033. ಪ್ರತಿ ಮತಗಟ್ಟೆಗೆ 1191 ಮತದಾರರು ಇರಲಿದ್ದಾರೆ. ಮಹಿಳೆಯರು 70, ಅಂಗವಿಕಲರು 70 ಮತಗಟ್ಟೆಗಳನ್ನು ನಿರ್ವಹಣೆ ಮಾಡಲಿದ್ದಾರೆ.
ತಕ್ಷಣವೇ ದೆಹಲಿಯಲ್ಲಿ ಮಾದರಿ ನೀತಿ ಸಂಹಿತಿ ಜಾರಿಯಾಗಿದ್ದು, ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷಗಳು ಮತದಾರರಿಗೆ ಅಮಿಷವೊಡ್ಡುವ ಇಲ್ಲವೇ ಆಶ್ವಾಸನೆಗಳನ್ನು ನೀಡುವುದಕ್ಕೆ ಆಯೋಗ ಕಟ್ಟುನಿಟ್ಟಾಗಿ ನಿಷೇಧ ಮಾಡಿದೆ.
ದೆಹಲಿಯಲ್ಲಿ ಈ ಬಾರಿ ಒಟ್ಟ್ಟು 1.55 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ ಪುರುಷರು 83.49 ಲಕ್ಷ, 71.74 ಲಕ್ಷ ಮಹಿಳೆಯರು, 25.89 ಲಕ್ಷ (20-29) ಯುವ ಮತದಾರರು. ಮೊದಲ ಬಾರಿಯ ಮತದಾರರು 2.08 ಲಕ್ಷ. ಅಂಗವಿಕಲರು 79,436, 100 ವರ್ಷ ಮೀರಿದ 830, ತೃತೀಯ ಲಿಂಗಿಗಳು 1,261, 85 + ವಯಸ್ಸಿನ 1.09 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ.
ಮನೆಯಿಂದಲೇ ಮತದಾನ :
85 ವರ್ಷ ಮೇಲ್ಪಟ್ಟ ಮತದಾರರು ಮತ್ತು ದಿವ್ಯಾಂಗರು ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯವಿರುತ್ತದೆ. ಮತದಾನದ ಅನುಕೂಲಕ್ಕಾಗಿ ಮತದಾನ ಕೇಂದ್ರಗಳಲ್ಲಿ ಸ್ವಯಂಸೇವಕರು, ಗಾಲಿಕುರ್ಚಿಗಳು ಮತ್ತು ರ್ಯಾಂಪ್‍ಗಳನ್ನು ಮಾಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಇವಿಎಂ ಟ್ಯಾಂಪರಿಂಗ್ ಆರೋಪಗಳು ಆಧಾರರಹಿತ
ಮತ ಎಣಿಕೆಗೆ ಇವಿಎಂ ಸಂಪೂರ್ಣ ಸುರಕ್ಷಿತವಾಗಿದೆ, ಇವಿಎಂ ಟ್ಯಾಂಪರಿಂಗ್ ಆರೋಪಗಳು ಆಧಾರರಹಿತವಾಗಿವೆ ಎಂದರು. ಚುನಾವಣಾ ಪ್ರಕ್ರಿಯೆಗಳ ಕುರಿತು ಹಲವು ಅನುಮಾನಗಳಿವೆ. ಇವುಗಳಿಗೆ ದೆಹಲಿ ಚುನಾವಣೆ ಮೂಲಕ ಮತ್ತೆ ಉತ್ತರ ನೀಡಲಾಗುತ್ತದೆ. 5 ಗಂಟೆಯ ಬಳಿಕ ಮತದಾನ ಪ್ರಮಾಣ ಹೆಚ್ಚಾಗುತ್ತದೆ, ಇವಿಎಂ ಬಗ್ಗೆಯೂ ಹಲವು ಅನುಮಾನ ವ್ಯಕ್ತಪಡಿಸಲಾಗುತ್ತಿದೆ. 2024ರ ಲೋಕಸಭೆ ಚುನಾವಣೆ ಬಳಿಕ ಈ ಮಾದರಿ ಎಲ್ಲಾ ಗೊಂದಲಗಳನ್ನು ಬಗೆಹರಿಸಲಾಗಿದೆ ಎಂದು ವದಂತಿಗಳಿಗೆ ತೆರೆ ಎಳೆದರು.
ಚುನಾವಣಾ ಪ್ರಕ್ರಿಯೆ, ಮತದಾನ ಪಾರದರ್ಶಕವಾಗಿ ನಡೆಯುತ್ತಿದೆ. ಯಾವುದೇ ವೈರಸ್ ಬಳಕೆ ಮಾಡಿಕೊಂಡು ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಇದನ್ನು ಪದೇ ಪದೇ ಹೇಳಲಾಗುತ್ತಿದೆ. ಮತ್ತೆ ಮತ್ತೆ ಸ್ಪಷ್ಟನೆಗಳನ್ನು ನೀಡಲಾಗುತ್ತದೆ ಎಂದು ರಾಜೀವ್ ಕುಮಾರ್ ಸ್ಪಷ್ಟಪಡಿಸಿದರು.
ಪಾರದರ್ಶಕ ಚುನಾವಣೆ ನಡೆಸುವುದು ನಮ್ಮ ಜವಾಬ್ದಾರಿ, ಕರ್ತವ್ಯ. ಸಂಜೆ 6 ಗಂಟೆಯ ಬಳಿಕ ಮತಗಟ್ಟೆ ಹೊರಗೆ ನಿಂತ ಎಲ್ಲರಿಗೂ ಟೋಕನ್ ವಿತರಣೆ ಮಾಡಿ ಅವರ ಮತಗಳನ್ನು ಪಡೆದು, ಮತದಾನವನ್ನು ಮುಕ್ತಾಯ ಮಾಡಲಾಗುತ್ತದೆ ಎಂದು ರಾಜೀವ್ ಕುಮಾರ್ ಹೇಳಿದರು.
ಆಮ್ ಆದ್ಮಿ ಅಭ್ಯರ್ಥಿಗಳ ಘೋಷಣೆ :
ಆಮ್ ಆದ್ಮಿ ಪಕ್ಷ ಎಲ್ಲಾ 70 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಜೊತೆಗೆ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಿಂದ ಹಾಗೂ ಹಾಲಿ ಸಿಎಂ ಅತಿಶಿ ಅವರು ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲು ಸೇರಿ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ.
ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಬಾರಿಯೂ ಹೊಸದಿಲ್ಲಿಯಿಂದ ಸ್ಪರ್ಧಿಸುತ್ತಿದ್ದಾರೆ. ಅವರ ಸ್ಪರ್ಧೆ ಕಾಂಗ್ರೆಸ್ನ ಸಂದೀಪ್ ದೀಕ್ಷಿತ್ ಮತ್ತು ಬಿಜೆಪಿಯ ಪ್ರವೇಶ್ ವರ್ಮಾ ಅವರೊಂದಿಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಸ್ಟಾರ್ ನಾಯಕರನ್ನು ಕಣಕ್ಕಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಹೋರಾಟ ರೋಚಕ ತಿರುವು ಪಡೆದುಕೊಂಡಿದೆ. ಮತ್ತೊಂದೆಡೆ ಮುಖ್ಯಮಂತ್ರಿ ಅತಿಶಿ ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅವರು ಕಾಂಗ್ರೆಸ್ನ ಅಲ್ಕಾ ಲಂಬಾ ಮತ್ತು ದಕ್ಷಿಣ ದೆಹಲಿಯ ಬಿಜೆಪಿ ಮಾಜಿ ಸಂಸದ ರಮೇಶ್ ಬಿಧುರಿ ಅವರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ.
ಬಿಜೆಪಿ 29 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ :
ಬಿಜೆಪಿ 29 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಎಎಪಿ ತೊರೆದು ಬಿಜೆಪಿ ಸೇರಿದ್ದ ಕೈಲಾಶ್ ಗೆಹ್ಲೋಟ್ ಬಿಜವಸನ್ನಿಂದ ಸ್ಪರ್ಧಿಸುತ್ತಿದ್ದಾರೆ. ಪಟೇಲ್ ನಗರದಿಂದ ರಾಜ್ ಕುಮಾರ್, ದೆಹಲಿಯ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದ್ ಸಿಂಗ್ ಲವ್ಲಿ ಗಾಂಧಿ ನಗರದಿಂದ ಸ್ಪರ್ಧಿಸಲಿದ್ದಾರೆ.
ಕಾಂಗ್ರೆಸ್ 48 ಅಭ್ಯರ್ಥಿಗಳ ಘೋಷಣೆ :
ಕಾಂಗ್ರೆಸ್ 48 ಅಭ್ಯರ್ಥಿಗಳನ್ನು ಘೋಷಿಸಿದ್ದು, ಮತ್ತೊಂದು ಪಟ್ಟಿ ಹೊರಬೇಕಿದೆ. ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಮಗ ಸಂದೀಪ್ ದೀಕ್ಷಿತ್ ಈ ಬಾರಿ ವಿಧಾನಸಭಾ ಚುನಾವಣೆಗೆ ಇಳಿಯಲಿದ್ದಾರೆ. ಈ ಹಿಂದೆ ಎರಡು ಬಾರಿ ಸಂಸದರಾಗಿದ್ದ ದೀಕ್ಷಿತ್ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. 2013 ಮತ್ತ 2015ರಲ್ಲಿ ಕೇಜ್ರಿವಾಲ್ ಅವರು ಶೀಲಾ ದೀಕ್ಷಿತ್ ವಿರುದ್ದ ಜಯ ಸಾಧಿಸಿದ್ದರು.
ಮಹಾರಾಷ್ಟ್ರ ಹಾಗೂ ಜಾರ್ಖಾಂಡ್ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಲು ಕಂಡಿರುವ ಕಾಂಗ್ರೆಸ್ ನೇತೃತ್ವದ ಇಚಿಡಿ ಮೈತ್ರಕೂಟ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಆದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದು ಆಮ್‍ಆದ್ಮಿ ಘೋಷಣೆ ಮಾಡಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಡುವುದು ಖಚಿತವಾಗಿದೆ.

