Delhi blast : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕಾರು ಸ್ಫೋಟ ಪ್ರಕರಣ ದೇಶಾದ್ಯಂತ ಭಾರಿ ಆತಂಕ ಸೃಷ್ಟಿ ಮಾಡಿದೆ. ಆದ್ದರಿಂದ ಇಡೀ ದೇಶದಲ್ಲಿ ಹೈ ಅಲರ್ಟ್ ಘೋಷಣೆಯಾಗಿದೆ. ನಿನ್ನೆಯಷ್ಟೇ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬರೋಬ್ಬರಿ 2500 ಕೆಜಿ ತೂಕದ ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ಇಂಥದ್ದೊಂದು ದುಷ್ಕೃತ್ಯ ನಡೆದಿರುವುದು ದೇಶದ ಜನರಲ್ಲಿ ಭೀತಿ ಉಂಟಾಗಿದೆ. ದೆಹಲಿ ಸ್ಫೋಟವು ಆತ್ಮಾಹುತಿ ಬಾಂಬ್ ದಾಳಿ ಎಂದು ಅನುಮಾನಿಸಲಾಗಿದೆ. ಅಲ್ಲದೆ, ಶಂಕಿತ ಸೂಸೈಡ್ ಬಾಂಬರ್ ಫೋಟೋ ಕೂಡ ಇದೀಗ ಬೆಳಕಿಗೆ ಬಂದಿದೆ.
ಶಂಕಿತನನ್ನು ಡಾ. ಉಮರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ತನ್ನ ಹೆಸರಿನಲ್ಲಿದ್ದ ಹ್ಯೂಂಡೈ ಐ20 ಕಾರನ್ನು ದೆಹಲಿಯ ಪ್ರತಿಷ್ಠಿತ ಕೆಂಪು ಕೋಟೆಯ ಬಳಿ ಸೋಮವಾರ ಸಂಜೆ ಸ್ಫೋಟಿಸಿದ್ದು, ಈ ಘಟನೆಯಲ್ಲಿ ಸುಮಾರು 9 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಶಂಕಿತ ಡಾ. ಉಮರ್ ದಕ್ಷಿಣ ಕಾಶ್ಮೀರದ ಪುಲ್ವಾಮದ ನಿವಾಸಿ. ತಮ್ಮ ಮಿಂಚಿನ ಕಾರ್ಯಾಚರಣೆಯಲ್ಲಿ “ವೈಟ್ ಕಾಲರ್” ಟೆರರಿಸ್ಟ್ ಮಾಡ್ಯೂಲ್ ಅನ್ನು ಭೇದಿಸಿದ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣದ ಪೊಲೀಸ್ ತಂಡಗಳು, ಸೋಮವಾರ ಬೆಳಗ್ಗೆ ಇಬ್ಬರು ವೈದ್ಯರಾದ ಡಾ. ಆದೀಲ್ ಅಹ್ಮದ್ ರಾಥರ್ ಮತ್ತು ಡಾ. ಮುಜಾಮಿಲ್ ಶಕಿಲ್ ಎಂಬುವರನ್ನು ಬಂಧಿಸಿದರು. ಶಂಕಿತ ಉಮರ್, ಈ ಇಬ್ಬರು ವೈದ್ಯರ ಸಹಚರನೆಂಬುದು ತಿಳಿದುಬಂದಿದೆ.
ತನ್ನ ಜತೆಗಾರರ ಬಂಧನ ಸುದ್ದಿ ಕೇಳುತ್ತಿದ್ದಂತೆ ಡಾ. ಉಮರ್, ಫರೀದಾಬಾದ್ನಿಂದ ಎಸ್ಕೇಪ್ ಆಗಿದ್ದ. ಎಲ್ಲಿ ನಾನು ಕೂಡ ಬಂಧಿಯಾಗುತ್ತೇನೆ ಎಂಬ ಭಯದಲ್ಲೇ ಉಮರ್ ಕಾರು ಸ್ಫೋಟ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದೇ ಉಮರ್, ಇನ್ನಿಬ್ಬರು ಸಹಚರರೊಂದಿಗೆ ದಾಳಿಯನ್ನು ಯೋಜಿಸಿದ್ದ ಮತ್ತು ಕಾರಿನಲ್ಲಿ ಡಿಟೋನೇಟರ್ ಅನ್ನು ಇಟ್ಟಿದ್ದ ಎಂದು ಮೂಲಗಳು ತಿಳಿಸಿವೆ.
ಕಾರು ಸ್ಫೋಟಗೊಳ್ಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
ಕೆಂಪು ಕೋಟೆಯ ಬಳಿ ಬಿಳಿ ಬಣ್ಣದ ಹ್ಯೂಂಡೈ ಐ20 ಕಾರು ಸ್ಫೋಟಗೊಳ್ಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರಿನ ನೋಂದಣಿ ಸಂಖ್ಯೆ HR 26CE7674. ಸುಮಾರು 3 ಗಂಟೆಗಳಿಗೂ ಹೆಚ್ಚು ಕಾಲ ಕೆಂಪು ಕೋಟೆಯ ಸಮೀಪವೇ ಈ ಕಾರನ್ನು ಪಾರ್ಕ್ ಮಾಡಲಾಗಿತ್ತು. ಮಧ್ಯಾಹ್ನ 3.19ಕ್ಕೆ ಆಗಮಿಸಿ, ಸಂಜೆ 6.30ಕ್ಕೆ ಅಲ್ಲಿಂದ ಹೊರಟಿತು.
ಮಸೀದಿ ಬಳಿ 3 ಗಂಟೆ ನಿಂತಿದ್ದ “i20” ಕಾರು :
ಸ್ಫೋಟದ ಸ್ಥಳದ ಬಳಿಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ನಂತರ, ಸ್ಫೋಟಗೊಂಡ ಹುಂಡೈ i20 ಕಾರು ಘಟನೆಗೆ ಸುಮಾರು 3 ಗಂಟೆಗಳ ಮೊದಲು ಸುನ್ಹೇರಿ ಮಸೀದಿ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ನಿಂತಿತ್ತು ಎಂದು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದಾರೆ.
ದೆಹಲಿ ಪೊಲೀಸರ ಪ್ರಕಾರ, ನವೆಂಬರ್ 10 ರಂದು ಮಧ್ಯಾಹ್ನ 3:19 ಕ್ಕೆ ಕಾರು ಪಾರ್ಕಿಂಗ್ ಸ್ಥಳಕ್ಕೆ ಪ್ರವೇಶಿಸಿ ಸಂಜೆ 6:48 ಕ್ಕೆ ಹೊರಟಿತು. ಕೇವಲ 4 ನಿಮಿಷಗಳ ನಂತರ, ಸಂಜೆ 6:52 ಕ್ಕೆ, ಸುಭಾಷ್ ಮಾರ್ಗ್ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾರು ಸ್ಫೋಟಗೊಂಡು, ಹತ್ತಿರದ ಹಲವಾರು ವಾಹನಗಳು ಮುಳುಗಿದವು. ಘಟನೆಯಲ್ಲಿ ಎಂಟು ಜನರು ಸಾವನ್ನಪ್ಪಿದರು ಮತ್ತು 20 ಜನರು ಗಾಯಗೊಂಡರು.
ʻಫರಿದಾಬಾದ್ ಮಾಡ್ಯೂಲ್ʼ ಗ್ಯಾಂಗ್ ಅರೆಸ್ಟ್ ಆಗಿದ್ದಕ್ಕೆಕಾರು ಸ್ಫೋಟ
ಕೆಂಪುಕೋಟೆ ಬಳಿ ಸ್ಫೋಟಗೊಂಡ ಐ20 ಕಾರಿನಲ್ಲಿ ಫರಿದಾಬಾದ್ ವೈದ್ಯ ಡಾ. ಉಮರ್ ಯು ನಬಿ ಸೂಸೈಡ್ ಬಾಂಬರ್ ಆಗಿ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ. 2,900 ಕೆಜಿ ಸ್ಫೋಟಕ ಪತ್ತೆಯಾದ ಫರಿದಾಬಾದ್ ಮಾಡ್ಯೂಲ್ ಜೊತೆ ಸಂಬಂಧ ಹೊಂದಿದ್ದ ಪುಲ್ವಾಮಾ ಮೂಲದ ಉಮರ್ ಯು ನಬಿ ಕಾರಿನಲ್ಲಿ ಇದ್ದಿರಬಹುದು ಎಂಬ ಅನುಮಾನ ಈಗ ವ್ಯಕ್ತವಾಗಿದೆ. ತನ್ನ ತಂಡದ ಸದಸ್ಯರನ್ನು ಬಂಧಿಸಿದ ವಿಚಾರ ಗೊತ್ತಾಗಿ ಪರಾರಿಯಾಗಿದ್ದ ನಬಿ ಸೋಮವಾರ ಏಕಾಂಗಿಯಾಗಿ ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ ಎಂದು ತನಿಖಾ ಸಂಸ್ಥೆಗಳ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.
ಸ್ಪೋಟಗೊಂಡ ಕಾರಿನ ಹಿನ್ನಲೆ :
ಆರಂಭಿಕ ತನಿಖೆಯ ಪ್ರಕಾರ, ದಾಳಿಯಲ್ಲಿ ಬಳಸಲಾದ ಕಾರು ಹಲವು ಬಾರಿ ಕೈ ಬದಲಾಗಿದೆ ಅಂದರೆ ವ್ಯಕ್ತಿಗಳಿಂದ ವ್ಯಕ್ತಿಗೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ಈ ಕಾರನ್ನು ಸಲ್ಮಾನ್ ಎಂಬುವರು 2025 ಮಾರ್ಚ್ ತಿಂಗಳಲ್ಲಿ ದೇವೇಂದರ್ ಅವರಿಗೆ ಮಾರಾಟ ಮಾಡಿದ್ದರು. ನಂತರ, ಅಕ್ಟೋಬರ್ 29ರಂದು ದೇವೇಂದರ್ನಿಂದ ಆಮಿರ್ಗೆ ಹಸ್ತಾಂತರವಾಯಿತು. ಬಳಿಕ ಆಮಿರ್ನಿಂದ ಅದು ಡಾ. ಉಮರ್ ಮೊಹಮ್ಮದ್ ಗೆ ತಲುಪಿತು. ಕಾರು ವಿನಿಮಯದ ಬಗ್ಗೆ ತಾರಿಕ್‌ಗೆ ಮಾಹಿತಿ ಇತ್ತು. ದೆಹಲಿ ಪೊಲೀಸ್ ತಂಡವು ಆಮಿರ್ ಮತ್ತು ತಾರಿಕ್ ಎಂಬುವರನ್ನು ಸದ್ಯ ವಿಚಾರಣೆ ನಡೆಸುತ್ತಿದೆ.
ಕಾರಿಗೆ ಇದೆ ಪುಲ್ವಾಮಾ ನಂಟು!
ಸ್ಫೋಟಕ್ಕೆ ಕಾರಣವಾದ ಐ20 ಕಾರಿನ ಮೂಲ ಮಾಲೀಕರನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಈಗ ಆರಂಭಿಸಿದ್ದಾರೆ. HR 26CE7674 ನಂಬರಿನ ಕಾರು ಮೊದಲು ಮೊಹಮ್ಮದ್ ಸಲ್ಮಾನ್ ಹೆಸರಿನಲ್ಲಿ ಹರಿಯಾಣದಲ್ಲಿ ನೋಂದಣಿಯಾಗಿತ್ತು. ನಂತರ ಸಲ್ಮಾನ್ ಈ ಕಾರನ್ನು ಮೊಹಮ್ಮದ್ ನದೀಂಗೆ ಮಾರಾಟ ಮಾಡಿದ್ದ.
ನದೀಂ ಈ ಕಾರನ್ನು ಒಂದೂವರೆ ವರ್ಷದ ಹಿಂದೆ ಫರೀದಾಬಾದ್‌ನಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರು ಡೀಲರ್ ದೇವೇಂದ್ರಗೆ ಮಾರಾಟ ಮಾಡಿದ್ದ. ದೇವೇಂದ್ರನ ಬಳಿಯಿಂದ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿರುವ ತಾರೀಕ್ ಖಾನ್ ಖರೀದಿಸಿದ್ದ ವಿಚಾರ ಬೆಳಕಿಗೆ ಬಂದಿದೆ.

