ಬೆಂಗಳೂರು, ಏಪ್ರಿಲ್ 09: ರಾಜ್ಯದ ಜನತೆಗೆ ಕರ್ನಾಟಕ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ದಂತ ಚಿಕಿತ್ಸೆಗೆ ಸಂಬಂಧಿಸಿದ ಮಹತ್ವದ ನಿರ್ಧಾರ ಕೈಗೊಂಡಿದೆ.
ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ್ ಆರೋಗ್ಯ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಈಗ ಹಲ್ಲಿನ ರೂಟ್ ಕ್ಯಾನಲ್ ಚಿಕಿತ್ಸೆಯನ್ನು ಸೇರಿಸಲು ಅನುಮೋದನೆ ನೀಡಲಾಗಿದೆ.
ಈ ಮೂಲಕ ಫಲಾನುಭವಿಗಳು ದಂತ ಚಿಕಿತ್ಸೆಯನ್ನೂ ಇದೇ ಯೋಜನೆಯಡಿ ಪಡೆಯಬಹುದಾಗಿದೆ. ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಸಾರ್ವಜನಿಕ ಆರೋಗ್ಯ ಸೇವೆಯನ್ನು ಹಂತ ಹಂತವಾಗಿ ಬಲಪಡಿಸುವ ದಿಸೆಯಲ್ಲಿ ಇದು ಪ್ರಮುಖ ಹೆಜ್ಜೆಯಾಗಿದ್ದು, ಯೋಜನೆಯಡಿ ಮುಂಭಾಗ (Anterior) ಹಾಗೂ ಹಿಂಭಾಗ (Posterior) ಹಲ್ಲುಗಳ ರೂಟ್ ಕ್ಯಾನಲ್ ಚಿಕಿತ್ಸೆಯನ್ನೂ ಒಳಗೊಂಡಿದೆ. ಇದರಿಂದ ರಾಜ್ಯದಾದ್ಯಂತ ಸಮಯೋಚಿತ, ಕೈಗೆಟುಕುವ ಮತ್ತು ಗುಣಮಟ್ಟದ ದಂತ ಆರೋಗ್ಯ ಸೇವೆಗಳು ಲಭ್ಯವಾಗಲಿವೆ.
ಇದಲ್ಲದೆ, CGHS ಟಿಯರ್-3 ಮಾನದಂಡದ ಪ್ಯಾಕೇಜ್ ದರಗಳು ಹಾಗೂ ಸ್ಪಷ್ಟ ಕ್ಲಿನಿಕಲ್ ವರ್ಗೀಕರಣದೊಂದಿಗೆ ಚಿಕಿತ್ಸೆಗಳಲ್ಲಿ ಏಕರೂಪತೆ ತರಲು ಸಹಾಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಜಾರಿಗೆ ತರಲಾಗುತ್ತಿರುವ ಈ ಪ್ಯಾಕೇಜ್‌ನಲ್ಲಿ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳು ಒಳಗೊಂಡಿದ್ದು, ರೋಗಿಗಳು ಹೆಚ್ಚುವರಿ ಶುಲ್ಕಗಳನ್ನು ಭರಿಸುವ ಅಗತ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

