ಮುಂಬೈ, ಮಾ.22: ‘ಧುರಂಧರ್: ದಿ ರಿವೆಂಜ್’ ಸಿನಿಮಾ ಆರಂಭದಿಂದಲೇ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ರಣವೀರ್ ಸಿಂಗ್ ಅಭಿನಯದ ಈ ಸ್ಪೈ ಥ್ರಿಲ್ಲರ್ ಪ್ರೇಕ್ಷಕರ ನಿರೀಕ್ಷೆಗಳನ್ನು ಸಂಪೂರ್ಣವಾಗಿ ಪೂರೈಸಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರ ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ 500 ಕೋಟಿ ಕ್ಲಬ್ ಸೇರಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ.
ಮಾರ್ಚ್ 18ರಂದು ಪ್ರೀಮಿಯರ್ ಶೋ ಆರಂಭಗೊಂಡ ಈ ಚಿತ್ರ ಮೊದಲ ದಿನವೇ ಭರ್ಜರಿ ಓಪನಿಂಗ್ ಕಂಡು 43 ಕೋಟಿ ರೂ. ಗಳಿಕೆ ಮಾಡಿತು. ನಂತರ ಮಾರ್ಚ್ 19ರಂದು ದೇಶದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾದ ಚಿತ್ರ, ಮೊದಲ ದಿನವೇ 102.55 ಕೋಟಿ ರೂ. ಸಂಗ್ರಹಿಸಿ ಸದ್ದು ಮಾಡಿತು.
ಎರಡನೇ ದಿನವಾದ ಶುಕ್ರವಾರ ಸ್ವಲ್ಪ ಕುಸಿತ ಕಂಡು 80.72 ಕೋಟಿ ರೂ. ಗಳಿಸಿದರೂ, ಮೂರನೇ ದಿನ ಶನಿವಾರ ಮತ್ತೆ ಜೋರಾಗಿ ಕಮ್‌ಬ್ಯಾಕ್ ಮಾಡಿ ಸುಮಾರು 40% ಏರಿಕೆಯಿಂದ 113 ಕೋಟಿ ರೂ. ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟು ನಿವ್ವಳ ಗಳಿಕೆ ಭಾರತದಲ್ಲಿ 339.37 ಕೋಟಿ ರೂ.ಗೆ ಏರಿಕೆಯಾಗಿದ್ದು, ಒಟ್ಟು ಕಲೆಕ್ಷನ್ 404.54 ಕೋಟಿ ರೂ. ದಾಟಿದೆ.
ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್ ರಾಮ್‌ಪಾಲ್, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಅವರ ಈ ಚಿತ್ರ ಅವರಿಗೆ ಮತ್ತಷ್ಟು ಖ್ಯಾತಿ ತಂದುಕೊಟ್ಟಿದೆ.
ಸಕ್ನಿಲ್ಕ್ ವರದಿಯ ಪ್ರಕಾರ, ಚಿತ್ರದ ಪ್ರೀಮಿಯರ್ ಶೋಗಳಿಂದಲೇ 43 ಕೋಟಿ ರೂ. ಗಳಿಕೆಯಾಗಿ ಹೊಸ ದಾಖಲೆ ನಿರ್ಮಾಣವಾಗಿದ್ದು, ಹಿಂದಿ ಆವೃತ್ತಿಯೇ 78.94 ಕೋಟಿ ರೂ. ಗಳಿಸಿದೆ. ಒಟ್ಟಾರೆ, ಚಿತ್ರದ ಪ್ರದರ್ಶನ ಎರಡನೇ ದಿನದಲ್ಲಿ 62.6% ಮಟ್ಟದಲ್ಲಿ ದಾಖಲಾಗಿದ್ದು, ಇದು ಉತ್ತಮ ಪ್ರತಿಕ್ರಿಯೆಯ ಸೂಚಕವಾಗಿದೆ.

