ಅಯೋಧ್ಯೆ: ಒಡಿಶಾದಿಂದ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರಕ್ಕೆ 286 ಕೆಜಿ ತೂಕದ ಅಪರೂಪದ ಭಾರೀ ಸ್ವರ್ಣ ಧನಸ್ಸು ಸಮರ್ಪಿಸಲಾಯಿತು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ಈ ವಿಶಿಷ್ಟ ಧನಸ್ಸು ಭಕ್ತರಲ್ಲಿ ಅಪಾರ ಭಕ್ತಿ ಮತ್ತು ಆಕರ್ಷಣೆಯನ್ನು ಮೂಡಿಸಿದೆ.
ಈ ಸ್ವರ್ಣ ಧನುಸ್ಸನ್ನು ತಮಿಳುನಾಡಿನ ಕಾಂಚೀಪುರಂನ ಮಹಿಳಾ ಕುಶಲಕರ್ಮಿಗಳು ಅತ್ಯಂತ ನೈಪುಣ್ಯದಿಂದ ರೂಪಿಸಿದ್ದಾರೆ. ಚಿನ್ನ, ಬೆಳ್ಳಿ, ತಾಮ್ರ, ಸತು ಹಾಗೂ ಕಬ್ಬಿಣದ ಮಿಶ್ರಲೋಹದಿಂದ ಈ ಧನಸ್ಸು ತಯಾರಿಸಲ್ಪಟ್ಟಿದ್ದು, ಅದರ ನಿರ್ಮಾಣ ಕಾರ್ಯ ಒಡಿಶಾದಲ್ಲಿ ಸಂಪೂರ್ಣಗೊಂಡಿದೆ. ಸೂಕ್ಷ್ಮ ಶಿಲ್ಪಕಲೆಯೊಂದಿಗೆ ರೂಪುಗೊಂಡ ಈ ಧನಸ್ಸು ಭಾರತೀಯ ಪರಂಪರೆಯ ಕೈತೋಟ ಕೌಶಲ್ಯದ ಜೀವಂತ ಸಾಕ್ಷಿಯಾಗಿದೆ.
ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಮಂದಿರದ ಉದ್ಘಾಟನೆಯ ನಂತರ ದೇಶದ ವಿವಿಧ ಭಾಗಗಳಿಂದ ಭಕ್ತರು ದರ್ಶನಕ್ಕಾಗಿ ನಿರಂತರವಾಗಿ ಆಗಮಿಸುತ್ತಿದ್ದಾರೆ. ದಿನೇದಿನೇ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ರಾಮ ಮಂದಿರವು ದೇಶದ ಪ್ರಮುಖ ಭಕ್ತಿಯ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.

