National Herald Case : ನ್ಯಾಷನಲ್ ಹೆರಾಲ್ಡ್ ಪ್ರಕರಣ ಈಗ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಅವರ ಬಾಗಿಲಿಗೆ ಬಂದು ನಿಂತಿದೆ. ಯಂಗ್ ಇಂಡಿಯಾಗೆ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ 2.5 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ನಲ್ಲಿ ಇಬ್ಬರ ಹೆಸರು ಉಲ್ಲೇಖಿಸಿದೆ ಎಂದು ತಿಳಿದುಬಂದಿದೆ.
ಹೀಗಾಗಿ ಡಿಕೆ ಬ್ರದರ್ಸ್ಗೆ ಇಡಿ ಸಂಕಷ್ಟ ಎದುರಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಹೋದರರು, ನಾನು 25 ಲಕ್ಷ, ನನ್ನ ತಮ್ಮ ಡಿ.ಕೆ.ಸುರೇಶ್ 25 ಲಕ್ಷ ಕೊಟ್ಟಿದ್ದಾನೆ. ನಮ್ಮ ಪಕ್ಷ ನಡೆಸುತ್ತಿದ್ದ ಪತ್ರಿಕೆಗೆ ದೇಣಿಗೆ ಕೊಟ್ಟರೆ ತಪ್ಪೇನು? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸಿದ್ದ ಇಡಿ ಅಧಿಕಾರಿಗಳು , ದೇಣಿಗೆ ನೀಡಿದ್ದ ಮೂಲವನ್ನು ಕೆದಕಿದ್ದು, ಈ ಸಂಬಂಧ 2022ರ ನವೆಂಬರ್ ನಲ್ಲಿ ಡಿಕೆ ಸರೇಶ್ ಅವರನ್ನು ವಿಚಾರಣೆಗೊಳಪಡಿಸಿತ್ತು. ಎರಡು ದಿನಗಳ ವಿಚಾರಣೆ ವೇಳೆ ಡಿಕೆ ಸುರೇಶ್ ಸಹ ದೇಣಿಗೆ ನೀಡಿದ ಹಣದ ಮೂಲದ ದಾಖಲೆಗಳನ್ನು ಇಡಿ ಮುಂದಿಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಈ ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದ ಚಾರ್ಜ್ಶೀಟ್ನಲ್ಲಿ ಇಡಿ ಅಧಿಕಾರಿಗಳು, ಡಿಸಿಎಂ ಡಿಕೆ ಶಿವಕುಮಾರ್, ಡಿಕೆ ಸುರೇಶ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೆಸರು ಉಲ್ಲೇಖ ಮಾಡಿದ್ದಾರೆ.
ರಾಜಾರೋಷವಾಗಿ 25 ಲಕ್ಷ ರೂ. ಕೊಟ್ಟಿದ್ದೇನೆ; ಡಿ.ಕೆ ಶಿವಕುಮಾರ್
ನ್ಯಾಷನಲ್ ಹೆರಾಲ್ಡ್ ನಮ್ಮ ಪಕ್ಷ ನಡೆಸುವಂತಹ ಪತ್ರಿಕೆ ಅದಕ್ಕೆ ನಾನು ಹಾಗೂ ಸುರೇಶ್ 25 ಲಕ್ಷ ದುಡ್ಡು ಕೊಟ್ಟಿದ್ದೇವೆ, ನಮ್ಮ ಟ್ರಸ್ಟ್ ನಿಂದಲೂ ದೇಣಿಗೆ ನೀಡಿದ್ದೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ದೇಣಿಗೆ ನೀಡಿರುವುದರಿಂದ ನಿಮಗೆ ತೊಂದರೆಯಾಗುತ್ತದೆಯೇ ಎಂದಾಗ ವಿಜಯಪುರ ಜಿಲ್ಲೆ ಕೊಲ್ಹಾರದಲ್ಲಿ ಇಂದು (23) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ದುಡಿದಂತಹ ಆಸ್ತಿಯಿಂದ ರಾಜರೋಷವಾಗಿ ಹಣ ನೀಡಿದ್ದೇವೆ, ನಾವು ಕದ್ದುಮುಚ್ಚಿ ಹಣ ನೀಡಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಈ ಬಗ್ಗೆ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯಿಸಿ, ಯಂಗ್ ಇಂಡಿಯಾ ಟ್ರಸ್ಟ್ ಗೆ ಹಣ ಕೊಟ್ಟಿದ್ದೇವೆ. ಎರಡು, ಎರಡೂವರೆ ಕೋಟಿ ರೂ. ಹಣ ಕೊಟ್ಟಿದ್ದೇವೆ. ಈ ಸಂಬಂಧ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇವೆ. ನಾವು ಕೊಟ್ಟಿಲ್ಲ ಅಂತ ಹೇಳುತ್ತಿಲ್ಲ. ದುರುದ್ದೇಶ ಪೂರ್ವಕವಾಗಿ ಆರೋಪ ಮಾಡುತ್ತಿದ್ದು, ನಮ್ಮ ಕಾಂಗ್ರೆಸ್ ನಾಯಕರ ಮೇಲೆ ಹೊರಿಸುವ ಪ್ರಯತ್ನ ಚಾರ್ಜ್‌ಶೀಟ್ ನಲ್ಲಿ ಮಾಡಿದ್ದಾರೆ. ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಇದು ರಾಜಕೀಯ ಪೂರಿತವಾದ ಪ್ರಕರಣ. ಸೋನಿಯಾ ಗಾಂಧಿಯವರ ಟ್ರಸ್ಟ್ ಅಲ್ಲ. ಯಂಗ್ ಇಂಡಿಯಾ ಸಂಸ್ಥೆಗೆ ಕೊಟ್ಟಿರೋದು. ಅವರು ವೈಯುಕ್ತಿಕವಾಗಿ ಹಣ ಬಳಸಿಕೊಂಡಿಲ್ಲ. ಅದು ಟ್ರಸ್ಟ್ ಗೆ ಬಳಕೆಯಾಗಿದೆ. ಇಡಿಯವರಿಗೂ ಎಲ್ಲ ಮಾಹಿತಿ ಕೊಟ್ಟಿದ್ದೇವೆ. ಇದರಲ್ಲಿ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಹೇಳಿದರು.

