ಕಾಸರಗೋಡು: ರಾಜಕೀಯದಲ್ಲಿ ಯಾರು, ಯಾರಿಗೆ, ಯಾವಾಗ ಮಿತ್ರರಾಗುತ್ತಾರೆ, ಯಾವಾಗ ಶತ್ರುವಾಗುತ್ತಾರೆ ಎನ್ನುವುದನ್ನು ಊಹಿಸಿವುದು ಕೂಡ ಕಷ್ಟ. ಇದಕ್ಕೆ ತಾಜಾ ಉದಾಹರಣೆಯೆಂದರೆ ಉಪಮುಖ್ಯಮಂತ್ರಿ ಡಿ.ಕೆ.ಶೀವಕುಮಾರ್ ಮತ್ತು ಮಾಜಿ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು. ನಿನ್ನೆ ವೇದಿಕೆಯೊಂದರಲ್ಲಿ ಕಟೀಲು ಪರವಾಗಿ ಡಿಕೆಶಿ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ್ದು, ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗುರಿಯಾಗಿದೆ.
ಕಾಸರಗೋಡಿನ ಪ್ರಸಿದ್ಧ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಶನಿವಾರ ಡಿ.ಕೆ.ಶಿವಕುಮಾರ್ ಅನಿರೀಕ್ಷಿತವಾಗಿ ಭೇಟಿ ನೀಡಿದ್ದರು.
ಧಾರ್ಮಿಕ ಸಭೆಯ ವೇದಿಕೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ನಳಿನ್ ಕುಮಾರ್ ಕಟೀಲು ಇದ್ದರು. ತನ್ನ ಭಾಷಣದಲ್ಲಿ ಡಿ.ಕೆ.ಶಿವಕುಮಾರ್, ನಳಿನ್ ಕುಮಾರ್ ಕಟೀಲುಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ ಎಂದು ನಾನು ಪ್ರಾರ್ಥಿಸಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ನನ್ನ ಮಿತ್ರ, ಲೋಕಸಭೆಯ ಮಾಜಿ ಸದಸ್ಯ ನಳಿನ್ ಕುಮಾರ್ ಕಟೀಲ್ ಇದ್ದಾರೆ. ಅವರು ಮಾಜಿ ಅಂದುಕೊಳ್ಳೋದು ಬೇಡ, ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಹೀರೊ ಝೀರೊ ಆಗುತ್ತಾನೆ, ಝೀರೊ ಹೀರೊ ಆಗುತ್ತಾನೆ. ನಾನು ಮತ್ತು ನೀವು ಒಂದೇ ವೇದಿಕೆಯಲ್ಲಿ ದೇವರನ್ನು ಪ್ರಾರ್ಥನೆ ಮಾಡಿದ್ದೇವೆ.
ಭಗವಂತ ನಿಮ್ಮ ಎಲ್ಲ ವಿಘ್ನ ನಿವಾರಣೆ ಮಾಡಿ ಮತ್ತೆ ಈ ರಾಜ್ಯದಲ್ಲಿ ಸೇವೆ ಮಾಡುವ ಅವಕಾಶ ಕೊಡಲಿ. ಮತ್ತೆ ನಿಮಗೆ ಅವಕಾಶ ಸಿಗಲಿ ಅಂತ ನಾನೂ ಕೂಡ ಪ್ರಾರ್ಥನೆ ಮಾಡುತ್ತೇನೆ ಎಂದು ಡಿಕೆಶಿ ಹೇಳಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದ್ದಾರೆ.