ಡಾಲಿ ಧನಂಜಯ ಅಭಿನಯದ ‘ಕೋಟಿ’ (Kotee Film) ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ನಟ ಡಾಲಿ ಧನಂಜಯ (Daali Dhananjaya) ಅವರು ‘ಕೋಟಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಅವರ ಪಾತ್ರ ಡಿಫರೆಂಟ್ ಆಗಿರಲಿದೆ. ಪರಮ್ (Param) ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಹಾಡು, ಟೀಸರ್ ಮೂಲಕ ಜನರಲ್ಲಿ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟ್ರೇಲರ್ ಇಂದು (ಜೂನ್ 5) ಬಿಡುಗಡೆ ಆಗಿದೆ. ‘ಕೋಟಿ’ ಟ್ರೇಲರ್ (Kotee Trailer) ನೋಡಿ ಸಿನಿಪ್ರಿಯರಲ್ಲಿ ಕೌತುಕ ಹೆಚ್ಚಿದೆ. ಕಥೆಯ ಬಗ್ಗೆ ಒಂದಷ್ಟು ಸುಳಿವು ಬಿಟ್ಟುಕೊಡಲಾಗಿದೆ. ಜೂನ್ 14ರಂದು ‘ಕೋಟಿ’ ತೆರೆಕಾಣಲಿದ್ದು, ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ.

ಧನಂಜಯ (Dhananjay) ಅವರ ಸಾಮಾನ್ಯ ವ್ಯಕ್ತಿಯ ಗೆಟಪ್, ರಮೇಶ್ ಇಂದಿರಾ ಅವರ ನಟೋರಿಯಸ್ ವಿಲನ್ ಪಾತ್ರ, ತಾರಾ ಅವರ ತಾಯಿಯ ಪಾತ್ರ, ಕ್ವಾಲಿಟಿ ವಿಶುವಲ್ಸ್, ಮತ್ತೆ ಮತ್ತೆ ಕೇಳಬೇಕೆನಿಸುವ ಹಿನ್ನೆಲೆ ಸಂಗೀತ, ಹುಲಿವೇಷ ಇವೆಲ್ಲವು ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ನೆರೆದಿದ್ದವರ ಗಮನ ಸೆಳೆಯಿತು.
ನಾಯಕ ನಟ ಡಾಲಿ ಧನಂಜಯ ಇದೊಂದು ಮಿಡಲ್ ಕ್ಲಾಸ್ ಸಾಮಾನ್ಯ ವ್ಯಕ್ತಿಯ ಕತೆ. ಇದು ಎಲ್ಲರಿಗೂ ಕನೆಕ್ಟ್ ಆಗುವ ಫ್ಯಾಮಿಲಿ ಕಥೆ ಎಂದು ತಿಳಿಸಿದರು. ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಪರಮ್, ಇದೊಂದು ಕಂಟೆಂಟ್ ಇರುವ ಕಮರ್ಷಿಯಲ್ ಸಿನಿಮಾ. ಒಂದೊಳ್ಳೆ ಕತೆ, ಒಳ್ಳೆಯ ಮನರಂಜನೆ ಗ್ಯಾರಂಟಿ ಎಂದರು.

ಅಪ್ಪಟ ಕನ್ನಡ ಮಣ್ಣಿನ ಕತೆಯಾದ ಕೋಟಿ ಈಗಾಗಲೇ ಟೀಸರ್ ಮತ್ತು ಹಾಡುಗಳ ಮುಖಾಂತರ ಸದ್ದು ಮಾಡುತ್ತಿದೆ. ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ ‘ಕೋಟಿ’ ಗೆಲ್ಲುವ ಭರವಸೆಯಾಗಿ ಕಂಡಿದೆ. ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ (Moksha Kushal) ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ (Ramesh Indira) ನಟಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜೊತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ‘777 ಚಾರ್ಲಿ’ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ‘ಕಾಂತಾರ’ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿಯವರು ‘ಕೋಟಿ’ಯ ಸಂಕಲನಕಾರರಾದರೆ, ಟೆಲಿವಿಷನ್ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. ‘ಕೋಟಿʼ ಜೂನ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.