ಹೈದರಾಬಾದ್: ಜಾರಿ ನಿರ್ದೇಶನಾಲಯ (ED) ಇತ್ತೀಚೆಗೆ ಸೂಪರ್ಸ್ಟಾರ್ ಮಹೇಶ್ ಬಾಬು ಅವರಿಗೆ ನೋಟಿಸ್ ಜಾರಿ ಮಾಡಿದೆ. ಸಾಯಿಸೂರ್ಯ ಡೆವಲಪರ್ಸ್ ಮತ್ತು ಸುರಾನ ಪ್ರಾಜೆಕ್ಟ್ ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇಡಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಇದೇ ಏಪ್ರಿಲ್ 27ರಂದು ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ಗಳಲ್ಲಿ ತಿಳಿಸಲಾಗಿದ್ದು, ಮಹೇಶ್ ಬಾಬುಗೆ ಇದೀಗ ಸಂಕಷ್ಟ ಎದುರಾಗಿದೆ.
ಮಹೇಶ್ ಬಾಬು ಈ ಹಿಂದೆ ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನ ಪ್ರಾಜೆಕ್ಟ್ಗಳನ್ನು ಪ್ರಚಾರ ಮಾಡಿದ್ದಾರೆ. ಈ ಕಂಪನಿಗಳಲ್ಲಿನ ಹೂಡಿಕೆಗಳ ಮೇಲೆ ಮಹೇಶ್ ಬಾಬು ಪ್ರಭಾವ ಬೀರಿದ್ದಾರೆ ಎಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ.
ಆಂಗ್ಲಪತ್ರಿಕೆಯೊಂದು ವರದಿ ಮಾಡಿರುವಂತೆ, ‘ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನಾ ಗ್ರೂಪ್ ಪ್ರಾರಂಭಿಸಿದ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪ್ರಚಾರ ಮಾಡಲು ಮಹೇಶ್ ಅನುಮೋದನೆ ನೀಡಿದ್ದರು.
ಮಹೇಶ್ ಬಾಬು ಈ ಜಾಹಿರಾತು ಒಪ್ಪಂದಕ್ಕಾಗಿ 5.9 ಕೋಟಿ ರೂ.ಗಳನ್ನು ಪಡೆದಿದ್ದು, ಈ ಪೈಕಿ ಚೆಕ್ ಮೂಲಕ 3.4 ಕೋಟಿ ರೂ.ಗಳು ಮತ್ತು ನಗದು ಮೂಲಕ 2.5 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಈಗ, ನಗದು ಪಾವತಿ ಇಡಿ ಪರಿಶೀಲನೆಗೆ ಒಳಪಟ್ಟಿದೆ.
ಅಕ್ರಮ ವಹಿವಾಟು ಪತ್ತೆ!
ರಿಯಲ್ ಎಸ್ಟೇಟ್ ಗುಂಪುಗಳಾದ ಸುರಾನಾ ಗ್ರೂಪ್ ಡೆವಲಪರ್ಸ್ ಮತ್ತು ಸಾಯಿ ಸೂರ್ಯ ಡೆವಲಪರ್ಸ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ. ನಟ ಮಹೇಶ್ ಬಾಬು ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ಮಹೇಶ್ ಬಾಬು ಈ ಸಂಸ್ಥೆಯ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ 5.9 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಂಸ್ಥೆಗಳ ಶೋಧನೆಯಲ್ಲಿ 100 ಕೋಟಿ ರೂಪಾಯಿಗಳ ಅಕ್ರಮ ವಹಿವಾಟು ಪತ್ತೆಯಾಗಿದೆ. ರಿಯಲ್ ಎಸ್ಟೇಟ್ ಗುಂಪುಗಳಾದ ಸುರಾನಾ ಗ್ರೂಪ್ ಮತ್ತು ಸಾಯಿ ಸೂರ್ಯ ಡೆವಲಪರ್ಸ್ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹೇಶ್ ಬಾಬು ಅವರು ತನಿಖೆ ಎದುರಿಸುತ್ತಿದ್ದಾರೆ.
ಹೈದರಾಬಾದ್ನಲ್ಲಿ ಇಡಿ ಶೋಧ
ಏಪ್ರಿಲ್ 16ರಂದು ಇಡಿ ಅಧಿಕಾರಿಗಳು ಹೈದರಾಬಾದ್ನಲ್ಲಿ ಶೋಧ ನಡೆಸಿದ್ದರು. ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಕಚೇರಿಗಳು ಹಾಗೂ ಈ ಕಂಪನಿಗಳ ಮುಖ್ಯಸ್ಥರ ಮನೆಗಳ ಮೇಲೆ ದಾಳಿ ನಡೆಸಿತ್ತು. ಇದಾದ ಬೆನ್ನಲ್ಲೇ ಇಡಿ ಆಧಿಕಾರಿಗಳು ಮಹೇಶ್ ಬಾಬುಗೆ ನೋಟಿಸ್ ಜಾರಿ ಮಾಡಿದ್ದು, ಏಪ್ರಿಲ್ 28ರ ಬೆಳಿಗ್ಗೆ 10:30ಕ್ಕೆ ಮಹೇಶ್ ಬಾಬು ಹೈದರಾಬಾದ್ನಲ್ಲಿ ವಿಚಾರಣೆಗೆ ಹಾಜರಾಗಬೇಕಿದೆ.
ಜಾಹಿರಾತು ತಂದ ಸಂಕಷ್ಟ
ಮಹೇಶ್ ಬಾಬು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಸಾಯಿಸೂರ್ಯ ಡೆವಲಪರ್ಸ್ ಜಾಹೀರಾತಿನಲ್ಲಿ ನಟಿಸಿದ್ದರು. ಇದೇ ಜಾಹಿರಾತು ವಿಚಾರವಾಗಿ ಇದೀಗ ಮಹೇಶ್ ಬಾಬು ಅವರಿಗೆ ಸಂಕಷ್ಟ ಎದುರಾಗಿದೆ.