ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿ ತೆರಿಗೆ ಮತ್ತು ಖರ್ಚು ಮಸೂದೆಯನ್ನು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟೀಕಿಸಿದ್ದಾರೆ. ಅದನ್ನು ‘ಸಾಲ ಗುಲಾಮಗಿರಿ ಮಸೂದೆ’ ಎಂದು ಟೀಕಿಸಿದ್ದಾರೆ.
‘ಅಮೆರಿಕ ಪಕ್ಷ’ ಎಂಬ ಹೊಸ ರಾಜಕೀಯ ಪಾರ್ಟಿ ಕಟ್ಟುವುದಾಗಿ ಟ್ರಂಪ್‌ಗೆ ಮಸ್ಕ್ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ಅಂತಿಮ ಮತದಾನಕ್ಕೆ ಮುನ್ನ ಸೆನೆಟ್, ಟ್ರಂಪ್ ಅವರ ಮಸೂದೆ ಬಗ್ಗೆ ಚರ್ಚಿಸುತ್ತಿದ್ದ ಹೊತ್ತಲ್ಲೇ ಮಸ್ಕ್ ಈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಭಾರತ ಹೊರಗಿಟ್ಟು ಸಾರ್ಕ್‌ಗೆ ಪರ್ಯಾಯವಾಗಿ ಹೊಸ ಪ್ರಾದೇಶಿಕ ಒಕ್ಕೂಟ ರಚಿಸಲು ಚಿಂತನೆ
ಈ ಹಿಂದೆ ಟ್ರಂಪ್ ಅವರನ್ನು ಬೆಂಬಲಿಸಿ ಪ್ರಚಾರಕ್ಕೆ 250 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಕೊಡುಗೆ ನೀಡಿದ್ದ ಮಸ್ಕ್, ತೆರಿಗೆ ಮಸೂದೆಯನ್ನು ನಿರಂತರವಾಗಿ ಟೀಕಿಸುತ್ತಾ ಬಂದಿದ್ದಾರೆ. ಇದು ರಾಷ್ಟ್ರೀಯ ಸಾಲಕ್ಕೆ 3 ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚು ಸೇರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
‘ಸಾಲದ ಮಿತಿಯನ್ನು ದಾಖಲೆಯ ಐದು ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಿಸುವ ಈ ಮಸೂದೆಯ ಹುಚ್ಚುತನದ ಖರ್ಚಿನಿಂದ ನಾವು ಏಕಪಕ್ಷೀಯ ದೇಶದಲ್ಲಿ ವಾಸಿಸುತ್ತಿದ್ದೇವೆ ಎಂಬುದು ಸ್ಪಷ್ಟವಾಗಿದೆ. ಜನರ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವ ಹೊಸ ರಾಜಕೀಯ ಪಕ್ಷಕ್ಕೆ ಸಮಯ ಎಂದು ಮಸ್ಕ್ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಏನಿದು ಬಿಗ್ ಬ್ಯೂಟಿಫುಲ್ ಬಿಲ್..?
ಡೊನಾಲ್ಡ್ ಟ್ರಂಪ್ ಅವರ ನೇತೃತ್ವದ ಸರ್ಕಾರ ಜಾರಿಗೆ ತರಲು ಹೊರಟಿರುವ ದೊಡ್ಡ ಕಾಯ್ದೆ ಸಾಕಷ್ಟು ವಿಚಾರಗಳಿಗೆ ಗಮನ ಸೆಳೆದಿದೆ. ‘ಒನ್ ಬಿಗ್ ಬ್ಯೂಟಿಫುಲ್ ಬಿಲ್ ಆ್ಯಕ್ಟ್’ (One Big Beautiful Bill Act) ಎಂದು ಕರೆಯಲಾಗುವ ಇದು 4.2 ಟ್ರಿಲಿಯನ್ ಡಾಲರ್ (360 ಲಕ್ಷ ಕೋಟಿ ರೂ) ಮೌಲ್ಯದ ಶಾಸನ ಎಂದು ವರ್ಣಿತವಾಗುತ್ತಿದೆ. 1,000 ಪುಟಗಳ ಈ ಮಹಾ ಮಸೂದೆಯು ಅಮೆರಿಕನ್ ಸಂಸತ್ತಿನಲ್ಲಿ ಅನುಮೋದನೆ ಪಡೆಯುವ ಹಾದಿಯಲ್ಲಿದೆ. ಅಲ್ಲಿಯ ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಅದಕ್ಕೆ ಅನುಮೋದನೆ ಸಿಕ್ಕಿದೆ. ಮೇಲ್ಮನೆಯಾದ ಸೆನೇಟ್ನಲ್ಲಿ ಪ್ರಾಥಮಿಕ ಅನುಮೋದನೆ ಪಡೆದಿದೆ. ಇವತ್ತು ಮತ್ತು ನಾಳೆ ವ್ಯಾಪಕ ಚರ್ಚೆ, ವಿಮರ್ಶೆ ಮತ್ತು ವೋಟಿಂಗ್ ನಡೆಯಲಿದೆ.
ಸೆನೇಟ್ನಲ್ಲಿ ಮಸೂದೆಗೆ ತಿದ್ದುಪಡಿಯಾಗಿ ಅದಕ್ಕೆ ವೋಟಿಂಗ್ ಮೂಲಕ ಅನುಮೋದನೆ ಸಿಕ್ಕರೆ, ನಂತರ ಈ ತಿದ್ದುಪಡಿ ಮಸೂದೆಯನ್ನು ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಅನುಮೋದನೆಗೆ ವಾಪಸ್ ಬರುತ್ತದೆ. ಅಲ್ಲಿ ಒಪ್ಪಿಗೆ ಪಡೆದ ಬಳಿಕ ಅಧ್ಯಕ್ಷರಿಂದ ಅಂತಿಮ ಮುದ್ರೆ ಸಿಕ್ಕು ನಂತರ ಕಾಯ್ದೆಯಾಗಿ ಬದಲಾಗುತ್ತದೆ.

