ನವದೆಹಲಿ: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಭಾರತ ತನ್ನ ರಾಯಭಾರ ಕಚೇರಿಯನ್ನು ಪುನರಾರಂಭಿಸಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಘೋಷಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ಭಾರತದ ರಾಯಭಾರ ಕಚೇರಿಯನ್ನು ಮತ್ತೆ ತೆರೆಯಲಾಗುತ್ತಿದೆ. ಈ ಮೂಲಕ ಅಫ್ಘಾನಿಸ್ತಾನದೊಂದಿಗೆ ರಾಜತಾಂತ್ರಿಕ ವ್ಯವಹಾರವನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ.
2021ರಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕ ನೇತೃತ್ವದ ನ್ಯಾಟೊ ಪಡೆ ತನ್ನ ಸೇನೆಯನ್ನು ಹಿಂಪಡೆದಿತ್ತು. ಬಳಿಕ ತಾಲಿಬಾನ್ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ರಾಯಭಾರ ಕಚೇರಿಯನ್ನು ಮುಚ್ಚಲಾಗಿತ್ತು. ಅದಾದ ಒಂದು ವರ್ಷದ ಬಳಿಕ ವ್ಯಾಪಾರ, ವೈದ್ಯಕೀಯ ಹಾಗೂ ಮಾನವೀಯ ನೆರವಿಗಾಗಿ ಸಣ್ಣ ನಿಯೋಗವನ್ನು ರಚಿಸಿತ್ತು.
ಭಾರತಕ್ಕೆ ಭೇಟಿ ನೀಡಿರುವ ಅಫ್ಘಾನ್ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ ಅವರೊಂದಿಗೆ ಮಾತುಕತೆ ವೇಳೆ ವಿದೇಶಾಂಗ ಸಚಿವ ಜೈಶಂಕರ್ ಈ ಕುರಿತು ಘೋಷಣೆ ಮಾಡಿದ್ದಾರೆ. ಈ ವೇಳೆ ಅಫ್ಘಾನಿಸ್ತಾನಕ್ಕೆ ಭಾರತದ ಬೆಂಬಲವನ್ನು ಜೈಶಂಕರ್ ಪುನರುಚ್ಚರಿಸಿದ್ದಾರೆ.
ಪಾಕ್ಗೆ ಭಾರತ, ಅಫ್ಘಾನಿಸ್ತಾನ ಜಂಟಿ ಎಚ್ಚರಿಕೆ
ಭಾರತ ಮತ್ತು ಅಫ್ಘಾನಿಸ್ತಾನ ಸಾಮೂಹಿಕವಾಗಿ ಪಾಕಿಸ್ತಾನವನ್ನು ಟೀಕಿಸಿದ್ದು, ತನ್ನ ಪ್ರದೇಶವನ್ನು ಯಾರ ವಿರುದ್ಧವೂ ಬಳಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಶುಕ್ರವಾರ (ಸೆಪ್ಟೆಂಬರ್,10) ಹೇಳಿದ್ದಾರೆ.
ಈ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ಜತೆ ಮಾತನಾಡಿದ ಮುತ್ತಕಿ, ಅಮೆರಿಕದ ಆಕ್ರಮಣದ ಸಮಯದಲ್ಲಿ, ಅನೇಕ ಏರಿಳಿತಗಳು ಇದ್ದವು. ಅದರೆ, ನಾವು ಎಂದಿಗೂ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಲಿಲ್ಲ ಮತ್ತು ಯಾವಾಗಲೂ ಭಾರತದೊಂದಿಗಿನ ಉತ್ತಮ ಸಂಬಂಧವನ್ನು ಗೌರವಿಸುತ್ತೇವೆ. ಅಲ್ಲದೆ, ಯಾವುದೇ ಪಡೆಗಳು ನಮ್ಮ ಪ್ರದೇಶವನ್ನು ಇತರರ ವಿರುದ್ಧ ಬೆದರಿಸಲು ಅಥವಾ ಬಳಸಲು ನಾವು ಅನುಮತಿಸುವುದಿಲ್ಲ ಎಂದು ತಿಳಿಸಿದ್ದಾರೆ.

