ಬೆರ್ನ್: ಹೊಸ ವರ್ಷಾಚರಣೆ ಸಂಭ್ರಮದ ನಡುವೆಯೇ ಐಷಾರಾಮಿ ಸ್ವಿಸ್ ಸ್ಕೀ ರೆಸಾರ್ಟ್‌ನ (Swiss Ski Resort) ಬಾರ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 40 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ವಿಸ್ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬಾರ್‌ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ. ಸ್ಫೋಟದ ಬಳಿಕ ಬಾರ್‌ನಿಂದ ದಟ್ಟ ಹೊಗೆ ಆಕಾಶಕ್ಕೆ ಏರಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ದೃಶ್ಯಗಳ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿವೆ.
ಘಟನಾ ಸ್ಥಳದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಅಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲು ಏರ್-ಗ್ಲೇಸಿಯರ್ ಹೆಲಿಕಾಪ್ಟರ್‌ಗಳ ಸಹಾಯದಿಂದ ರಕ್ಷಣಾ ಹಾಗೂ ಸ್ಥಳಾಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಫೋಟದಲ್ಲಿ ಸಂತ್ರಸ್ತರಾದವರ ಕುಟುಂಬಗಳಿಗೆ ಮಾಹಿತಿ ನೀಡಲು ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಸ್ವಿಸ್ ಆಲ್ಪ್ಸ್‌ನ ಹೃದಯಭಾಗದಲ್ಲಿರುವ ಕ್ರಾನ್ಸ್-ಮೊಂಟಾನಾ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಸ್ಕೀಯಿಂಗ್, ಸ್ನೋಬೋರ್ಡಿಂಗ್ ಹಾಗೂ ಗಾಲ್ಫ್‌ನಂತಹ ಚಟುವಟಿಕೆಗಳಿಗಾಗಿ ವಿಶ್ವದ ವಿವಿಧ ದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹೊಸ ವರ್ಷದ ಸಂಭ್ರಮದ ಸಮಯದಲ್ಲಿ ಈ ದುರಂತ ಸಂಭವಿಸಿರುವುದು ದೇಶಾದ್ಯಂತ ಶೋಕವನ್ನುಂಟುಮಾಡಿದೆ.

