ಮೈಸೂರು : ನಗರದ ಹೊರವಲಯದ ತಿ.ನರಸೀಪುರದ ಕೆಂಪಯ್ಯನಹುಂಡಿ ಗೇಟ್ ಬಳಿಯ ಹೋಟೆಲ್ ಸಮೀಪ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಸ್ಫೋಟಕಗಳು ಪತ್ತೆಯಾಗಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಸ್ಫೋಟಕ ವಸ್ತುಗಳನ್ನು ಅಪರಿಚಿತರು ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್ನಲ್ಲಿಟ್ಟು ಹೋಗಿದ್ದರು. ಸ್ಥಳೀಯರು ಹಾಗೂ ಹೋಟೆಲ್ ಸಿಬ್ಬಂದಿ ಅನುಮಾನಗೊಂಡು ನೋಡಿದಾಗ ಸ್ಫೋಟಕ ವಸ್ತುಗಳು ಎಂದು ತಿಳಿದು ಬಂದಿದೆ.
ಬಳಿಕ ಹೋಟೆಲ್ ಸಿಬ್ಬಂದಿ ಪ್ಲಾಸ್ಟಿಕ್ ಕವರ್ ಅನ್ನು ಪಕ್ಕದಲ್ಲಿರುವ ಮರಕ್ಕೆ ನೇತು ಹಾಕಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣವೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಜೊತೆ ಧಾವಿಸಿದ ಪೊಲೀಸರು, ಸ್ಫೋಟಕಗಳಿದ್ದ ಕವರ್ ಅನ್ನು ಪರಿಶೀಲಿಸಿದ್ದಾರೆ.
ಕವರ್ನಲ್ಲಿ ಟ್ಯೂಬ್ ಆಕಾರದಲ್ಲಿರುವ 9 ಸ್ಪೋಟಕಗಳು ಮತ್ತು ಒಂದು ನಾಡ ಬಾಂಬ್ ಆಕಾರದ ವಸ್ತು ಪತ್ತೆಯಾಗಿದೆ. ಸ್ಫೋಟಕ ವಸ್ತುಗಳು ಕಲ್ಲು ಗಣಿಗಾರಿಕೆಗೆ ಹಾಗೂ ನಾಡ ಬಾಂಬ್ ಕಾಡು ಪ್ರಾಣಿಗಳ ಬೇಟೆಗೆ ಬಳಕೆಗೆ ಬಳಸಲಾಗುವ ವಸ್ತುಗಳಂತೆ ಕಂಡುಬಂದಿವೆ.
ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.