ರಾಯಚೂರು, ಜನವರಿ 29: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಗರ್ಭಿಣಿ ಸೊಸೆಯ ಕತ್ತು ಸೀಳಿ ಮಾವನೇ ಹತ್ಯೆ ಮಾಡಿದ ಭೀಕರ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಅಣಗಿ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು 25 ವರ್ಷದ ರೇಖಾ ಎಂದು ಗುರುತಿಸಲಾಗಿದೆ. ಕುಟುಂಬದೊಳಗಿನ ತೀವ್ರ ಕಲಹದ ಹಿನ್ನೆಲೆಯಲ್ಲಿ ಮಾವ ಸಿದ್ದಪ್ಪ ಗರ್ಭಿಣಿಯಾಗಿದ್ದ ರೇಖಾಳ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ರೇಖಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯಾದ ಸಿದ್ದಪ್ಪನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಅಮಾನವೀಯ ಕೃತ್ಯ ಗ್ರಾಮದಲ್ಲಿ ತೀವ್ರ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ.

