ಬೆಂಗಳೂರು, ಫೆಬ್ರವರಿ 20: ಕರ್ನಾಟಕದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಇನ್ನು ಮುಂದೆ ಚಿತ್ರೀಕರಣಕ್ಕೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ. ಅನುಮತಿ ಪಡೆದು, ನಿಗದಿತ ಶುಲ್ಕ ಪಾವತಿಸಿದವರಿಗೆ ಮಾತ್ರ ಶೂಟಿಂಗ್‌ಗೆ ಅವಕಾಶ ನೀಡಲಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಮುಜರಾಯಿ ಇಲಾಖೆ ವ್ಯಾಪ್ತಿಯ ‘ಎ’ ಹಾಗೂ ‘ಬಿ’ ಗ್ರೇಡ್ ದೇವಾಲಯಗಳಲ್ಲಿ ಶುಲ್ಕ ಪಾವತಿ ಕಡ್ಡಾಯಗೊಳಿಸಲಾಗಿದೆ. ಭಕ್ತಿಯ ಪಾವಿತ್ರ್ಯತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಈ ನೀತಿ ಹೊಸದಲ್ಲ. 2003ರಲ್ಲಿ ಮೊದಲ ಮಾರ್ಗಸೂಚಿ ಹೊರಡಿಸಲಾಗಿದ್ದು, 2012ರಲ್ಲಿ ಮತ್ತೊಂದು ಮಾರ್ಗಸೂಚಿ ಜಾರಿಗೊಂಡಿತ್ತು. ಆದರೆ ವಿಡಿಯೋ ಚಿತ್ರೀಕರಣಕ್ಕೂ ಶುಲ್ಕ ಪಾವತಿಸಬೇಕು ಎಂಬ ಮಾಹಿತಿ ಬಹುತೇಕರಿಗೆ ತಿಳಿದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳ ಮೂಲಕ ರೀಲ್ಸ್, ಯೂಟ್ಯೂಬ್ ವಿಡಿಯೋಗಳು ಹಾಗೂ ಇತರೆ ವಾಣಿಜ್ಯ ಉದ್ದೇಶಗಳಿಗಾಗಿ ದೇವಾಲಯಗಳಲ್ಲಿ ಚಿತ್ರೀಕರಣ ಹೆಚ್ಚಾಗಿದೆ. ಇದರಿಂದ ದೇವಾಲಯಗಳ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುತ್ತಿದೆ ಎಂಬ ದೂರಿನ ಹಿನ್ನೆಲೆ, 2012ರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಇಲಾಖೆ ಮುಂದಾಗಿದೆ.
ದೇವಾಲಯಗಳ ಪಾವಿತ್ರ್ಯತೆ ಹಾಗೂ ಧಾರ್ಮಿಕ ಭಾವನೆಗಳನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಜರಾಯಿ ಇಲಾಖೆ ತಿಳಿಸಿದೆ. ಕ್ಷೇತ್ರ ಮಹಿಮೆ ಸಾರುವ ಸಾಕ್ಷ್ಯಚಿತ್ರವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಬಾರದು ಎಂಬುದನ್ನು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಶುಲ್ಕ ವಿವರಗಳು:
ಬೆಂಗಳೂರು ನಗರದ ದೇವಾಲಯಗಳಲ್ಲಿ ಚಲನಚಿತ್ರ ಚಿತ್ರೀಕರಣಕ್ಕೆ – ₹15,000
ಇತರೆ ಪ್ರದೇಶಗಳ ದೇವಾಲಯಗಳಲ್ಲಿ ಚಲನಚಿತ್ರ ಚಿತ್ರೀಕರಣಕ್ಕೆ – ₹10,000
ಧಾರಾವಾಹಿ / ಸಾಕ್ಷ್ಯಚಿತ್ರ / ವಾಣಿಜ್ಯ ಉದ್ದೇಶಗಳ ಚಿತ್ರೀಕರಣಕ್ಕೆ – ದಿನಕ್ಕೆ ₹5,000
ನ್ಯೂಸ್ ಚಾನೆಲ್‌ಗಳಲ್ಲಿ ಕ್ಷೇತ್ರ ಮಹಿಮೆ ಸಾರುವ, 5 ನಿಮಿಷ ಮೀರದ ಚಿತ್ರೀಕರಣಕ್ಕೆ – ₹250
5 ನಿಮಿಷ ಮೀರಿದರೆ – ಗಂಟೆಗಳ ಆಧಾರದಲ್ಲಿ ಹೆಚ್ಚುವರಿ ಶುಲ್ಕ
ಚಿತ್ರೀಕರಣ ಬಯಸುವವರು ದೇವಾಲಯದ ಹೆಸರಿನಲ್ಲಿ ಬೇಡಿಕೆ ಹುಂಡಿಗೆ ಶುಲ್ಕ ಪಾವತಿಸಿ, ಅನುಮತಿ ಪತ್ರವನ್ನು ಮುಜರಾಯಿ ಇಲಾಖೆಯ ಪ್ರಧಾನ ಕಚೇರಿಗೆ ಸಲ್ಲಿಸಬೇಕು. ನಂತರ ಸಂಬಂಧಿಸಿದ ದೇವಾಲಯಗಳಿಗೆ ಇಲಾಖೆ ಸೂಚನೆ ನೀಡುತ್ತದೆ. ದೇವಾಲಯ ಆಡಳಿತ ಮಂಡಳಿ ಭಕ್ತರಿಗೆ ತೊಂದರೆ ಆಗದಂತೆ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡುತ್ತದೆ.
ಮುಜರಾಯಿ ದೇವಾಲಯಗಳ ಮಾಹಿತಿ:
ಒಟ್ಟು ದೇವಾಲಯಗಳು – 34,563
‘ಎ’ ಗ್ರೇಡ್ (₹25 ಲಕ್ಷಕ್ಕೂ ಹೆಚ್ಚು ಆದಾಯ) – 205
‘ಬಿ’ ಗ್ರೇಡ್ (₹5 ರಿಂದ ₹25 ಲಕ್ಷ ಆದಾಯ) – 193
‘ಸಿ’ ಗ್ರೇಡ್ (₹5 ಲಕ್ಷಕ್ಕಿಂತ ಕಡಿಮೆ ಆದಾಯ) – 34,105

