ಬೆಂಗಳೂರು : ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಗಾರ್ಮೆಂಟ್ಸ್ ಗೋದಾಮಿಗೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ಕೋಟ್ಯಾಂತರ ಮೌಲ್ಯದ ಬಟ್ಟೆ, ಲೆದರ್ ಸಾಮಗ್ರಿಗಳು ಬೆಂಕಿ ಆಹುತಿಯಾಗಿದೆ. ಬೆಂಕಿ ನೋಡುತ್ತಿದ್ದಂತೆ ಗೋದಾಮಿನಲ್ಲಿದ್ದ ಕಾರ್ಮಿಕರು, ಸಿಬ್ಬಂದಿ ಹೊರ ಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ತಾಲ್ಲೂಕಿನ ಹೆಬ್ಬಗೋಡಿ ಕೈಗಾರಿಕ ಪ್ರದೇಶ ವ್ಯಾಪ್ತಿಯ ಸೀವಿಂಗ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್, ಐಐಜಿಎಂ ಒರಿಯನ್ ಆಪರೇಲ್ ಟ್ರಿಮ್ಸ್ ಮತ್ತು ಇಂಡಿಯಾ ಏಜೆನ್ಸಿಸ್ ಸೇರಿದಂತೆ ನಾಲ್ಕು ಕಂಪನಿಗಳಿಗೆ ಸೇರಿದ ಗೋದಾಮುಗಳು ಒಂದೆಡೆ ಇದೆ. ಎಲ್ಲಾ ಗೋದಾಮುಗಳು ಬೆಂಕಿಗೆ ಆಹುತಿಯಾಗಿವೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿವೆ.
ಗುರುವಾರ ಸಂಜೆ 5ರ ಸುಮಾರಿನಲ್ಲಿ ಗೋದಾಮಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ರಾಸಾಯನಿಕ, ಬಟ್ಟೆಗಳು ಸೇರಿದಂತೆ ಸುಲಭವಾಗಿ ಬೆಂಕಿ ಹೊತ್ತುಕೊಳ್ಳುವ ವಸ್ತುಗಳು ಇದ್ದುದ್ದರಿಂದ ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ವ್ಯಾಪಿಸಿತು. ಪಕ್ಕದಲ್ಲಿಯೇ ಹಲವಾರು ಕೈಗಾರಿಕೆಗಳಿವೆ. ಬೆಂಕಿಯ ಹೊಗೆಯು ಸುತ್ತಮುತ್ತಲಿನ ಪ್ರದೇಶವನ್ನು ಆವರಿಸಿಕೊಂಡು ಪ್ರದೇಶವೇ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಯಿತು.
ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ರೂ. ಮೌಲ್ಯದ ವಸ್ತು ಹಾಗೂ ಬಟ್ಟೆಗಳು ಸುಟ್ಟು ಕರಕಲಾಗಿವೆ. ಬಟ್ಟೆ ಕಾರ್ಖಾನೆ ಬೆಂಕಿಗಾಹುತಿಯಾದ ಘಟನೆ ಆನೇಕಲ್ ಬಳಿ ನಡೆದಿದೆ. ಬೆಂಕಿ ಹೊತ್ತಿಕೊಂಡಿರುವ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಹೈಗ್ರೌಂಡ್ಸ್, ಚಾಮರಾಜಪೇಟೆ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಸರ್ಜಾಪುರ ಸೇರಿದಂತೆ ಏಳು ಅಗ್ನಿಶಾಮಕ ದಳಗಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದರು. ಭಾರಿ ಪ್ರಮಾಣದಲ್ಲಿ ಆವರಿಸಿದ್ದ ಬೆಂಕಿಯ ಜ್ವಾಲೆಯನ್ನು ನಂದಿಸಲು ಹರಸಾಹಸ ಪಡಬೇಕಾಯಿತು. ಅಗ್ನಿ ದುರಂತ ಹಿನ್ನೆಲೆಯಲ್ಲಿ ಇಡೀ ಕೈಗಾರಿಕಾ ಪ್ರದೇಶದಲ್ಲಿ ಭಾರಿ ಹೊಗೆ ಆವರಿಸಿತ್ತು. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿತ್ತು.

