ನವದೆಹಲಿ : ಒಮ್ಮೆ ಪ್ರಧಾನಿ ಮೋದಿ ಅವರಿಂದ ಮೆಚ್ಚುಗೆ ಪಡೆದಿದ್ದ ಖ್ಯಾತ ಗಾಯಕಿ ಮೈಥಿಲಿ ಠಾಕೂರ್ ಅವರು 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತವರು ಕ್ಷೇತ್ರವಾದ ಮಧುಬನಿಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಬಿಹಾರದ ಉಸ್ತುವಾರಿ ವಿನೋದ್ ತಾವ್ಡೆ ಅವರು ಇತ್ತೀಚೆಗಷ್ಟೇ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರಾಯ್ ಅವರ ಜೊತೆ ಮೈಥಿಲಿ ಮತ್ತು ಅವರ ತಂದೆಯನ್ನು ಭೇಟಿ ಮಾಡಿದ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಮೈಥಿಲಿ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಇದೀಗ ಮತ್ತೆ ಬಲ ಬಂದಿದೆ. ತಮ್ಮ ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ತಾವ್ಡೆ, ಮೈಥಿಲಿಯನ್ನು “ಬಿಹಾರದ ಮಗಳು” ಎಂದು ಸಂಬೋಧಿಸಿ ರಾಜ್ಯಕ್ಕೆ ಮರಳಿ ಸ್ವಾಗತಿಸಿದ್ದಾರೆ.
1995ರಲ್ಲಿ ಲಾಲು ಪ್ರಸಾದ್ ಯಾದವ್ ಅಧಿಕಾರಕ್ಕೆ ಬಂದ ನಂತರ ಮೈಥಿಲಿ ಅವರ ಕುಟುಂಬ ಬಿಹಾರವನ್ನು ತೊರೆದಿತ್ತು. ಇದೀಗ ಬಿಹಾರದ ಬದಲಾವಣೆಯ ವೇಗವನ್ನು ನೋಡಿ ಬಿಹಾರಕ್ಕೆ ಮರಳಲು ಮೈಥಿಲಿ ಬಯಸಿದ್ದಾರೆ. ಆಕೆ ಬಿಹಾರದ ಮಗಳು. ಆಕೆಗೆ ಆತ್ಮೀಯ ಸ್ವಾಗತ ಎಂದು ಹೇಳುವ ಮೂಲಕ ತಾವ್ಡೆ ಅವರು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದ ಜನರಿಗೆ “ಕೊಡುಗೆ” ಮತ್ತು “ಅವರ ನಿರೀಕ್ಷೆಗಳನ್ನು ಪೂರೈಸಲು” ಮೈಥಿಲಿಯನ್ನು ನಿತ್ಯಾನಂದ ರೈ ಮತ್ತು ತಾವ್ಡೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ತಾವ್ಡೆ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಠಾಕೂರ್, ಬಿಹಾರಕ್ಕಾಗಿ ದೊಡ್ಡ ಕನಸು ಕಾಣುವ ಜನರೊಂದಿಗಿನ ಪ್ರತಿ ಸಂಭಾಷಣೆಯೂ ನನಗೆ ದೃಷ್ಟಿ ಮತ್ತು ಸೇವೆಯ ಶಕ್ತಿಯನ್ನು ನೆನಪಿಸುತ್ತದೆ. ನಾನು ಅವರಿಗೆ ಗೌರವ ಮತ್ತು ಹೃದಯದಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಅಂದಹಾಗೆ, ಶಾಸ್ತ್ರೀಯ ಗಾಯಕಿ ಮೈಥಿಲಿ ಅವರು ಮಿಥಿಲಾ ಪ್ರದೇಶದವರು. ಈ ಪ್ರದೇಶ ಮಧುಬನಿಯಲ್ಲಿದೆ. ಬಿಜೆಪಿ, ಠಾಕೂರ್ ಅವರಿಗೆ ಎರಡು ಸ್ಥಾನಗಳನ್ನು ನೀಡುವ ಸಾಧ್ಯತೆಯಿದೆ. ದರ್ಭಂಗಾದ ಮಧುಬನಿ ಮತ್ತು ಅಲಿಗಢ ಎರಡು ಕ್ಷೇತ್ರಗಳಲ್ಲಿ ಒಂದು ಸ್ಪರ್ಧಿಸುವ ಅವಕಾಶವನ್ನು ನೀಡಲಾಗಿದೆ. ಅಲ್ಲದೆ, ಮೈಥಿಲಿ ಕೂಡ ಸ್ಪರ್ಧಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಬಿಹಾರ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಚುನಾವಾಣಾ ಆಯೋಗ ಸೋಮವಾರ (ಅ.06) ಘೋಷಿಸಿದೆ. ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.
2024, ಜನವರಿ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಠಾಕೂರ್ ಅವರನ್ನು ಶ್ಲಾಘಿಸಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ, ಮೈಥಿಲಿ ಹಾಡಿದ ವಿಡಿಯೋವನ್ನು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಯ ಸಂದರ್ಭವು ದೇಶಾದ್ಯಂತ ನನ್ನ ಕುಟುಂಬ ಸದಸ್ಯರಿಗೆ ಭಗವಾನ್ ಶ್ರೀ ರಾಮನ ಜೀವನ ಮತ್ತು ಆದರ್ಶಗಳಿಗೆ ಸಂಬಂಧಿಸಿದ ಪ್ರತಿಯೊಂದು ಘಟನೆಯನ್ನು ನೆನಪಿಸುತ್ತಿದೆ. ಅಂತಹ ಒಂದು ಭಾವನಾತ್ಮಕ ಘಟನೆ ಶಬರಿಗೆ ಸಂಬಂಧಿಸಿದೆ. ಮೈಥಿಲಿ ಠಾಕೂರ್ ಜಿ ಅದನ್ನು ತಮ್ಮ ಸುಮಧುರ ರಾಗಗಳಲ್ಲಿ ಹೇಗೆ ಹಾಡಿದ್ದಾರೆ ಎಂಬುದನ್ನು ಕೇಳಿ ಎಂದು ಬರೆದುಕೊಂಡಿದ್ದರು.
ಇನ್ನು 2024 ರಲ್ಲಿ “ಆತ್ಮವಿಶ್ವಾಸ, ದೃಢನಿಶ್ಚಯದ ನವ ಭಾರತದ ಕಥೆಗಾರರನ್ನು” ಉತ್ತೇಜಿಸಲು ಸರ್ಕಾರ ಆಯೋಜಿಸಿದ ಮೊದಲ ರಾಷ್ಟ್ರೀಯ ಕ್ರಿಯೇಟರ್ ಪ್ರಶಸ್ತಿಗಳಲ್ಲಿ ಪ್ರಶಸ್ತಿ ಪಡೆದ 24 ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಲ್ಲಿ ಠಾಕೂರ್ ಕೂಡ ಒಬ್ಬರು. ಅವರಿಗೆ ‘ವರ್ಷದ ಸಾಂಸ್ಕೃತಿಕ ರಾಯಭಾರಿ’ ಪ್ರಶಸ್ತಿಯನ್ನು ನೀಡಲಾಯಿತು.

