ಬೆಂಗಳೂರು, ಜ.27: ಚಿಕ್ಕಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿ ಸ್ಕಂದಗಿರಿ ತಪ್ಪಲಿನಲ್ಲಿರುವ “ಓಂಕಾರ ಜ್ಯೋತಿ ಮಠ ಟ್ರಸ್ಟ್” ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಹುಳಿ ಮಾವು ಪ್ರದೇಶದ ಮಾಜಿ ಕಾರ್ಪೋರೇಟರ್ ಲಕ್ಷ್ಮೀನಾರಾಯಣ ಸೇರಿದಂತೆ ಕೆಲವರು ವ್ಯವಸ್ಥಿತ ಷಡ್ಯಂತ್ರ ರೂಪಿಸಿ ಹಲ್ಲೆ ಹಾಗೂ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮಠದ ಅಧ್ಯಕ್ಷರಾದ ಉಮಾ ಮಹೇಶ್ವರ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದ ಆಸ್ತಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಜನವರಿ 10ರಂದು ಲಕ್ಷ್ಮೀನಾರಾಯಣ ಹಾಗೂ ಅವರ ಬೆಂಬಲಿಗರ ನೂರಾರು ಮಂದಿ ಮಠದ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಈ ವೇಳೆ ತಮ್ಮ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಠಡಿಯಲ್ಲಿ ಬಂಧಿಸಿ ಮಠದಿಂದ ಹೊರಹಾಕಲು ಪ್ರಯತ್ನಿಸಲಾಗಿದೆ ಎಂದು ದೂರಿದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.
ಇದಕ್ಕೂ ಮೊದಲು ಡಿಸೆಂಬರ್ 17ರಂದು ಇದೇ ವ್ಯಕ್ತಿಗಳು ತಮ್ಮನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರು. ಆ ಸಂದರ್ಭದಲ್ಲೂ ದೂರು ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಹಲ್ಲೆ ಹಾಗೂ ದೊಂಬಿ ಗಲಾಟೆ ನಡೆಸಿದವರ ವಿರುದ್ಧ ಮತ್ತು ಕರ್ತವ್ಯ ನಿರ್ಲಕ್ಷ್ಯ ತೋರಿದ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಮಠದ ಆಸ್ತಿಯನ್ನು ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.
ಮರಿಯಪ್ಪ ಎಂಬವರು ಸುಮಾರು 26 ವರ್ಷಗಳ ಹಿಂದೆ ಇಲ್ಲಿ 2.12 ಗುಂಟೆ ಜಮೀನನ್ನು ಖರೀದಿಸಿ ಮಠವನ್ನು ಸ್ಥಾಪಿಸಿದ್ದರು. ಬಳಿಕ ಅವರ ಪತ್ನಿ ಸಾಧಿ ಜಯಮ್ಮ ಮಠದ ಜವಾಬ್ದಾರಿಯನ್ನು ವಹಿಸಿಕೊಂಡರು. ಇದೇ ತಿಂಗಳ 9ರಂದು ಪಟ್ಟಾಭಿಷೇಕ ನೆರವೇರಿದ್ದು, ತಾವು ಪೀಠಾಧಿಪತಿಯಾಗಿದ್ದು, ಸಾಧಿ ಜಯಮ್ಮ ಗೌರವಾಧ್ಯಕ್ಷರಾಗಿದ್ದಾರೆ ಎಂದು ಸ್ವಾಮೀಜಿ ವಿವರಿಸಿದರು.
ಹಿಂದೆಂದೂ ಮಠದ ಬಳಿ ಕಾಣಿಸಿಕೊಳ್ಳದವರು ಇದೀಗ ಜಯಮ್ಮ ಅವರ ರಕ್ತ ಸಂಬಂಧಿಗಳೆಂದು ಹೇಳಿಕೊಂಡು ಮಠ ತೆರವುಗೊಳಿಸಬೇಕು, ಜಾಗ ನಮ್ಮದೆಂದು ಗಲಾಟೆ ನಡೆಸುತ್ತಿದ್ದಾರೆ. ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿದ್ದರೂ ಸರ್ಕಾರ ಮತ್ತು ಪೊಲೀಸರು ಮೂಕಪ್ರೇಕ್ಷಕರಂತೆ ವರ್ತಿಸುತ್ತಿರುವುದು ಅತೀವ ನೋವುಂಟು ಮಾಡಿದೆ ಎಂದರು.
ಮಾಜಿ ಪಾಲಿಕೆ ಸದಸ್ಯ ಲಕ್ಷ್ಮೀನಾರಾಯಣ ಅವರೊಂದಿಗೆ ಪಾರ್ಥ ಸಾರಥಿ, ಲೀಲಾ, ಚಂದ್ರಶೇಖರ್, ವೆಂಕಟರೆಡ್ಡಿ, ಗೋಪಿನಾಥ್, ಪ್ರಕಾಶ, ಗುರುಪ್ರಸಾದ ಮತ್ತು ಸೂರ್ಯ ಎಂಬವರು ನಿರಂತರವಾಗಿ ತಮಗೂ ಮಠದ ಟ್ರಸ್ಟಿಗಳಿಗೂ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ದಾಳಿಯಿಂದ ತಮಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿಸಿ ಚಿಕಿತ್ಸೆ ಪಡೆಯಬೇಕಾಯಿತು ಎಂದರು.
ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವ ಜೊತೆಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಉಮಾ ಮಹೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು.

