ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್ ಅವರು ನಿಧನರಾಗಿದ್ದಾರೆ. ಮೃತರಿಗೆ 93 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಅವರ ಆರೊಗ್ಯದಲ್ಲಿ ಏರುಪೇರಾದ ಕಾರಣ ಕುಟುಂಬಸ್ಥರು ಅವರನ್ನು ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಗೆ ದಾಖಲಿಸಿದ್ದರು. ಅರೋಗ್ಯ ಸ್ಥಿತಿ ಹದಗೆಟ್ಟ ಕಾರಣ ಶನಿವಾರ ತಡರಾತ್ರಿ ಇಹಲೋಕ ನಿಧನರಾದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ 1931ರಲ್ಲಿ ಜನಿಸಿದ ನಟವರ್ ಸಿಂಗ್ ಅವರು ಹಿರಿಯ ರಾಜತಾಂತ್ರಿಕರಾಗಿದ್ದರು. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ 2004-05ರ ಅವಧಿಯಲ್ಲಿ ನಟವರ್ ಸಿಂಗ್ ಭಾರತದ ವಿದೇಶಾಂಗ ಸಚಿವರಾಗಿದ್ದರು. ಅವರು ತಮ್ಮ ರಾಜಕೀಯ ವೃತ್ತಿಜೀವನಕ್ಕೆ ರಾಜತಾಂತ್ರಿಕತೆಯ ಅನುಭವವನ್ನು ತಂದರು. ರಾಷ್ಟ್ರಕ್ಕೆ ಅವರ ಸೇವೆಗಾಗಿ 1984ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು.
ಅವರು ‘ದಿ ಲೆಗಸಿ ಆಫ್ ನೆಹರು: ಎ ಮೆಮೋರಿಯಲ್ ಟ್ರಿಬ್ಯೂಟ್’ ಮತ್ತು ‘ಮೈ ಚೀನಾ ಡೈರಿ 1956-88’ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಆತ್ಮಕಥೆಗೆ ‘ಒಂದು ಜೀವನವೇ ಸಾಕಾಗುವುದಿಲ್ಲ’ (ಒನ್ ಲೈಫ್ ಈಸ್ ನಾಟ್ ಎನಫ್) ಎಂದು ಹೆಸರಿಸಲಾಗಿದೆ.
ನಟವರ್ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಸೇರಿದಂತೆ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರು ಸಂತಾಪ ಸೂಚಿಸಿದ್ದಾರೆ. ನಟವರ್ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ನಟವರ್ ಸಿಂಗ್ ಅವರ ನಿಧನದಿಂದ ಬಹಳ ನೋವಾಗಿದೆ. ಅವರು ರಾಜತಾಂತ್ರಿಕತೆ ಮತ್ತು ವಿದೇಶಾಂಗ ನೀತಿಯ ಬಹಳ ಕೊಡುಗೆಗಳನ್ನು ನೀಡಿದ್ದಾರೆ. ಅವರು ತಮ್ಮ ಬುದ್ಧಿವಂತಿಕೆ ಮತ್ತು ಸಮೃದ್ಧ ಬರವಣಿಗೆಗೆ ಹೆಸರುವಾಸಿಯಾಗಿದ್ದರು ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

