ಬೆಂಗಳೂರು: ಶಾಸಕರ ವಿದೇಶ ಪ್ರವಾಸ ವಿಚಾರವಾಗಿ ಮಾಜಿ ಸಚಿವ ಕೆ.ಎನ್. ರಾಜಣ್ಣ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. “ಲೋಕೋ ಭಿನ್ನ ರುಚಿ… ನೀವು ಹೇಗೆ ಅರ್ಥೈಸಿಕೊಳ್ಳುತ್ತೀರೋ ಹಾಗೇ. ಶಾಸಕರು ವಿದೇಶಕ್ಕೆ ಹೋದರೆ ಪ್ರಶ್ನೆ ಮಾಡ್ತೀರಿ. ಆದರೆ ಎಷ್ಟು ಅಧಿಕಾರಿಗಳು ಸರ್ಕಾರಿ ದುಡ್ಡಲ್ಲಿ ವಿದೇಶಕ್ಕೆ ಹೋಗ್ತಾರೆ ಎಂಬ ಮಾಹಿತಿ ಇದೆಯಾ? ಅದನ್ನು ಯಾಕೆ ಕೇಳಲ್ಲ?” ಎಂದು ಪ್ರಶ್ನಿಸಿದರು.
ಸರ್ಕಾರಿ ಹಣದಲ್ಲಿ ಅಧಿಕಾರಿಗಳ ವಿದೇಶ ಪ್ರವಾಸಗಳ ಬಗ್ಗೆ ಯಾರೂ ಮಾತಾಡಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. “ಎಷ್ಟೋ ಅಧಿಕಾರಿಗಳು ಸರ್ಕಾರಿ ದುಡ್ಡಲ್ಲೇ ವಿದೇಶಕ್ಕೆ ಹೋಗ್ತಾರೆ. ಆದರೆ ಖಾಸಗಿ ಬದುಕಲ್ಲಿ ಶಾಸಕರು ಸ್ವಂತ ಖರ್ಚಿನಲ್ಲಿ ಹೊರಗೆ ಹೋದರೆ ಅದು ತಪ್ಪು ಎನ್ನುವುದು ಸರಿಯಲ್ಲ. ಅವಹೇಳನ ಮಾಡುವ ಪದ್ಧತಿ ಯಾಕೆ ಬರ್ತಾ ಇದೆಯೋ ಗೊತ್ತಿಲ್ಲ,” ಎಂದರು.
“ನಾನು ಹೋದಷ್ಟು ಫಾರಿನ್ ಟ್ರಿಪ್ ಯಾರೂ ಹೋಗಲ್ಲ. ನಾನು ಜೊತೆಯಲ್ಲಿ ಕರಕೊಂಡೂ ಹೋಗಲ್ಲ, ಬಂದ ಮೇಲೂ ಹೇಳಲ್ಲ… that’s my style,” ಎಂದು ರಾಜಣ್ಣ ಹೇಳಿದರು.
ವಿದೇಶ ಪ್ರವಾಸಗಳ ಪ್ರಯೋಜನಗಳ ಕುರಿತು ಮಾತನಾಡಿದ ಅವರು, “ಸದುದ್ದೇಶದಿಂದ ಮಾಡುವ ಪ್ರವಾಸಕ್ಕೆ ಹೋಗಿ ಬರಲಿ. ವಿದೇಶದಲ್ಲಿ ನಮಗೆ ಒಳ್ಳೆಯದಾಗುವ ಸಂಗತಿಗಳು ಇರುತ್ತವೆ. ಅವನ್ನು ಕಲಿತು ಬಂದು ಇಲ್ಲಿ ಅಳವಡಿಸಿಕೊಂಡರೆ ಒಳ್ಳೆಯದೇ. ಪ್ರಪಂಚದ ಯಾವ ದೇಶಗಳಲ್ಲಿ ರೈತರಿಗೆ ಅನುಕೂಲಕರ ಪದ್ದತಿ ಇದೆಯೋ ಅದನ್ನು ತಿಳಿದು ಬರಲಿ. ಪ್ರವಾಸ ತಡೆಯುವುದು ಸರಿಯಲ್ಲ,” ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಮಾತನಾಡಿದ ಅವರು, “ಸಿದ್ದರಾಮಯ್ಯ ಗಟ್ಟಿಯಾಗಿ ವಿಶ್ವಾಸದಲ್ಲಿದ್ದಾರೆ. ಬಜೆಟ್ ಮಂಡಿಸ್ತಿದ್ದಾರೆ ಅಂದ್ರೆ ಅವರಿಗೆ ಅಷ್ಟು ಕಾನ್ಫಿಡೆನ್ಸ್ ಇದೆ ಅಂತಾಯ್ತಲ್ಲ. ಯಥಾಸ್ಥಿತಿ ಅಂತಲೇ ಅರ್ಥ. ಮಹತ್ವದ ರಾಜಕೀಯ ಬದಲಾವಣೆ ಆಗತ್ತೆ ಅಂತ ಅಂದುಕೊಂಡರೆ ಅದು ಸುಳ್ಳು,” ಎಂದು ಸ್ಪಷ್ಟಪಡಿಸಿದರು.
“ರಾಜಕಾರಣದಲ್ಲಿ ಎಲ್ಲರೂ ಒಂದೇ ತರಹ ಇರ್ತಾರಾ? ದಿನಾ ಸಿದ್ದರಾಮಯ್ಯ ಹತ್ರ ಹೋದ್ರೆ ಯಾಕಯ್ಯ ಬಂದೆ ಅಂತ ಕೇಳಲ್ಲ. ಆರು ತಿಂಗಳು ಹೋಗಿಲ್ಲ ಅಂದ್ರೆ ಯಾಕೆ ಬಂದಿಲ್ಲ ಅಂತ ಕೇಳಲ್ಲ. ನಾವೆಲ್ಲ ಸಿದ್ದರಾಮಯ್ಯ ಬಣದವ್ರೇ ಅಲ್ವಾ? ಹಾಗಿದ್ದೂ ಯಾಕೆ ಫಾರಿನ್ ಹೋಗ್ತಾ ಇಲ್ಲಾ ಅಂತ ಪ್ರಶ್ನೆ ಮಾಡ್ತಾರೆ,” ಎಂದು ಅವರು ವ್ಯಂಗ್ಯವಾಡಿದರು.
ಇದಲ್ಲದೆ, ತಮ್ಮ ಪುತ್ರಿ ರಶ್ಮಿ ರಾಜಣ್ಣ ಅವರನ್ನು ರಾಜಕೀಯಕ್ಕೆ ತರಲು ಸಿದ್ಧತೆ ಇರುವುದಾಗಿ ಸೂಚನೆ ನೀಡಿದರು. “ಮಹಿಳಾ ಮೀಸಲಾತಿ ಬಂದರೆ ಮಗಳನ್ನೇ ನಿಲ್ಲುಸ್ತೇನೆ,” ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಈ ಮೂಲಕ ವಿದೇಶ ಪ್ರವಾಸ, ರಾಜಕೀಯ ಯಥಾಸ್ಥಿತಿ ಹಾಗೂ ಕುಟುಂಬ ರಾಜಕೀಯದ ಕುರಿತಂತೆ ಕೆ.ಎನ್. ರಾಜಣ್ಣ ನೀಡಿದ ಹೇಳಿಕೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

