ಮಂಡ್ಯ, ಫೆ.22: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸುರೇಶ್ ಗೌಡ ಅವರ ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿರುವ ಘಟನೆ ಜಿಲ್ಲೆಯ ಬೊಂತೆಕೊಪ್ಪಲು ಸಮೀಪ ಶನಿವಾರ ರಾತ್ರಿ ನಡೆದಿದೆ.
ನಾಗಮಂಗಲ ಕ್ಷೇತ್ರದ ಮಾಜಿ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರು ಕಾರ್ಯಕರ್ತರ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರಣ ಕಾರು ರಸ್ತೆ ಬದಿಯಲ್ಲಿ ಪಲ್ಟಿಯಾಗಿದ್ದು, ವಾಹನ ಭಾಗಶಃ ಜಖಂಗೊಂಡಿದೆ.
ಅಪಘಾತದಲ್ಲಿ ಸುರೇಶ್ ಗೌಡ ಅವರ ಕೈಗೆ ಪೆಟ್ಟು ಬಿದ್ದಿದ್ದು, ಚಾಲಕರಿಗೂ ಗಾಯಗಳಾಗಿವೆ. ಘಟನೆ ತಕ್ಷಣ ಅವರ ಗನ್‌ಮ್ಯಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ತಕ್ಷಣ ಮಂಡ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

