ಮಂಡ್ಯ, ಮಾರ್ಚ್ 11: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ ಅರ್ಚಕನೊಬ್ಬನ ಹತ್ಯೆ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. ಈ ಪ್ರಕರಣದಲ್ಲಿ ಪತ್ನಿಯೇ ತನ್ನ ಪ್ರಿಯಕರ ಮತ್ತು ಆತನ ಸ್ನೇಹಿತರ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿಸಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಹತ್ಯೆಯಾದ ಅರ್ಚಕನನ್ನು ಸಿದ್ದಲಿಂಗಪ್ಪ (46) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಸಿದ್ದಲಿಂಗಪ್ಪ ಅವರ ಪತ್ನಿ ಶಾಲಿನಿ, ಆಕೆಯ ಪ್ರಿಯಕರ ಹರೀಶ್ ಹಾಗೂ ಆತನ ಸ್ನೇಹಿತರಾದ ಸಂತೋಷ್ ಮತ್ತು ಗಣೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 6ರಂದು ಸಿಡಿಎಸ್ ನಾಲೆಯಲ್ಲಿ ಸಿದ್ದಲಿಂಗಪ್ಪ ಅವರ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಅಪಘಾತವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದರೂ, ಸ್ಥಳದಲ್ಲಿ ಸಿಕ್ಕಿದ್ದ ಚಪ್ಪಲಿ ಮತ್ತು ರಕ್ತದ ಕಲೆಗಳು ಪೊಲೀಸರಲ್ಲಿ ಅನುಮಾನ ಹುಟ್ಟಿಸಿತು.
ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಸಿದ್ದಲಿಂಗಪ್ಪ ಅವರ ಪತ್ನಿ ಶಾಲಿನಿ ಹಾಗೂ ಹರೀಶ್ ನಡುವೆ ಅನೈತಿಕ ಸಂಬಂಧ ಇದ್ದದ್ದು ಬೆಳಕಿಗೆ ಬಂದಿದೆ. ಸುಮಾರು ಒಂದೂವರೆ ವರ್ಷದ ಹಿಂದೆ ಈ ಸಂಬಂಧದ ಬಗ್ಗೆ ತಿಳಿದ ಸಿದ್ದಲಿಂಗಪ್ಪ, ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರೆಂದು ತಿಳಿದುಬಂದಿದೆ. ಬಳಿಕ ಕುಟುಂಬ ಉಳಿಸಿಕೊಳ್ಳುವ ಉದ್ದೇಶದಿಂದ ಪತ್ನಿಗೆ ಬುದ್ಧಿಮಾತು ಹೇಳಿ ಸರಿದಾರಿಗೆ ತರಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಆದರೆ ಪತಿ ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂದುಕೊಂಡ ಶಾಲಿನಿ, ಪ್ರಿಯಕರ ಹರೀಶ್ ಜೊತೆಗೂಡಿ ಕೊಲೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮಾರ್ಚ್ 6ರಂದು ಸಿದ್ದಲಿಂಗಪ್ಪ ಪೂಜೆಗಾಗಿ ಹೊರಗೆ ತೆರಳಿದ್ದ ವೇಳೆ ಶಾಲಿನಿ ಹರೀಶ್‌ಗೆ ಸಂದೇಶ ಕಳುಹಿಸಿ ಪತಿ ಮನೆಗೆ ಮರಳುವ ಸಮಯದ ಮಾಹಿತಿ ನೀಡಿದ್ದಳು.
ಪೂಜೆ ಮುಗಿಸಿಕೊಂಡು ಬೈಕ್‌ನಲ್ಲಿ ಮರಳುತ್ತಿದ್ದ ಸಿದ್ದಲಿಂಗಪ್ಪ ಅವರನ್ನು ಹರೀಶ್ ಹಾಗೂ ಆತನ ಸ್ನೇಹಿತರಾದ ಸಂತೋಷ್ ಮತ್ತು ಗಣೇಶ್ ಅಡ್ಡಗಟ್ಟಿ ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾರೆ. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹ ಮತ್ತು ಬೈಕ್ ಅನ್ನು ಸಿಡಿಎಸ್ ನಾಲೆಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು.
ಘಟನೆ ಸ್ಥಳದಲ್ಲಿ ಕಂಡುಬಂದ ರಕ್ತದ ಕಲೆಗಳ ಆಧಾರದ ಮೇಲೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ಪ್ರಕರಣದ ನಿಜಾಂಶವನ್ನು ಬಯಲಿಗೆಳೆದಿದ್ದಾರೆ. ವಿಚಾರಣೆ ವೇಳೆ ಶಾಲಿನಿ ಸೇರಿದಂತೆ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

