ಬೆಳಗಾವಿ : ರಾಜ್ಯದಲ್ಲಿ ಹೆಚ್ಚುತ್ತಿರುವ ಚಳಿ ಪ್ರಾಣಹಾನಿಗೆ ಕಾರಣವಾಗಿದೆ. ಚಳಿಯಿಂದ ತಪ್ಪಿಸಿಕೊಳ್ಳಲು ನಾಲ್ವರು ಯುವಕರು ರೂಮಿನೊಳಗೆ ಇದ್ದಿಲಿನ ಬೆಂಕಿ ಹಚ್ಚಿಕೊಂಡು ಮಲಗಿದ್ದ ವೇಳೆ ದುರಂತ ಸಂಭವಿಸಿದೆ.
ನಿದ್ರೆಯಲ್ಲಿದ್ದಾಗಲೇ ರೂಮಿನಲ್ಲಿ ತೀವ್ರ ಹೊಗೆ ಹರಡಿ, ಆಮ್ಲಜನಕದ ಕೊರತೆಯಿಂದ ಒದ್ದಾಡಿ ಮೂವರು ಯುವಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿಯ ಅಮನ್ ನಗರ ಮೂಲದ ರಿಹಾನ್, ಮೋಹಿನ್ ನಾಲಬಂದ, ಸರ್ಫರಾಜ್ ಹರಪ್ಪನಹಳ್ಳಿ ಮೃತಪಟ್ಟ ಯುವಕರಾಗಿದ್ದಾರೆ. ಇನ್ನೊಬ್ಬ ಯುವಕ ಶಾಹನಾವಾಜ್ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸ್ಥಳಕ್ಕೆ ಮಾಳಮಾರುತಿ ಠಾಣೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಶಾಸಕ ಆಸೀಫ್ ಸೇಠ್ ಕೂಡ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

