ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಜಿಲ್ಲಾಡಳಿತದಿಂದ ನಡೆಯುತ್ತಿರುವ ಉತ್ಖನನ ಕಾರ್ಯ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿದಿನ ಒಂದಿಲ್ಲೊಂದು ಅಮೂಲ್ಯ ಪುರಾತನ ವಸ್ತುಗಳು ಪತ್ತೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇಂದು ಉತ್ಖನನದ ವೇಳೆ ಅತ್ಯಮೂಲ್ಯವಾದ ಲೋಹದ ಗುಂಡು ಪತ್ತೆಯಾಗಿದ್ದು, ಪುರಾತತ್ವ ವಲಯದಲ್ಲಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಸಮೀಪ ಜಿಲ್ಲಾಡಳಿತ ಉತ್ಖನನ ಕಾರ್ಯವನ್ನು ನಡೆಸುತ್ತಿದ್ದು, ಈಗಾಗಲೇ ನಾಲ್ಕು ಬ್ಲಾಕ್‌ಗಳಾಗಿ ಮಣ್ಣು ತೆಗೆಯಲಾಗಿದೆ. ಈ ಅವಧಿಯಲ್ಲಿ ಶಿವಲಿಂಗ, ನಾಗರಕಲ್ಲು, ಶಿವಲಿಂಗದ ಪೀಠ, ವಿಗ್ರಹಗಳು, ದೇವಸ್ಥಾನದಂತ ಕುರುಹುಗಳು, ನವಶಿಲಾಯುಗದ ಕೈ ಕೊಡಲಿ, ಕೆಂಪು ಮಣಿ, ಟೆರ್ರಾಕೊಟಾದ ಬಿಲ್ಲೆಯಂತಹ ವಸ್ತುಗಳು ಹಾಗೂ ಅನೇಕ ಪ್ರಾಚ್ಯ ಅವಶೇಷಗಳು ಪತ್ತೆಯಾಗಿವೆ.
ಇಂದು ಪತ್ತೆಯಾಗಿರುವ ಲೋಹದ ಗುಂಡು ಸುಮಾರು ಅರ್ಧ ಕಿಲೋಗ್ರಾಂ ತೂಕವಿದೆ ಎಂದು ಅಂದಾಜಿಸಲಾಗಿದೆ. ಈ ಲೋಹದ ಗುಂಡು ಯಾವ ಕಾಲಕ್ಕೆ ಸೇರಿದದ್ದು? ಇದರ ಮೌಲ್ಯ ಎಷ್ಟು? ಯಾವ ಉದ್ದೇಶಕ್ಕಾಗಿ ಇದನ್ನು ಬಳಸಲಾಗುತ್ತಿತ್ತು? ಎಂಬುದರ ಕುರಿತು ಅಧಿಕಾರಿಗಳು ಸವಿಸ್ತಾರ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
ವೀರಭದ್ರೇಶ್ವರ ದೇವಾಲಯದ ಬಳಿ ಉತ್ಖನನ ಕಾರ್ಯ ಮುಂದುವರಿದಿದ್ದು, ಇನ್ನಷ್ಟು ಆಳವಾಗಿ ಮಣ್ಣು ತೆಗೆಯಲಾದಲ್ಲಿ ಪುರಾತನ ಹಾಗೂ ರಾಜ–ಮಹಾರಾಜರ ಕಾಲದ ಅಮೂಲ್ಯ ವಸ್ತುಗಳು ಪತ್ತೆಯಾಗುವ ಸಾಧ್ಯತೆ ಇದೆ. ಇದರಿಂದ ಲಕ್ಕುಂಡಿಯ ನೈಜ ವೈಭವ ಮತ್ತಷ್ಟು ಬೆಳಕಿಗೆ ಬರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಇನ್ನೊಂದೆಡೆ, ಉತ್ಖನನ ನಡೆಯುತ್ತಿರುವ ಸ್ಥಳಕ್ಕೆ ದೇಶಿ–ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲಾಡಳಿತ ಉತ್ಖನನ ಪ್ರದೇಶ ಹಾಗೂ ಸುತ್ತಮುತ್ತ ನಿಷೇಧಾಜ್ಞೆ ವಿಧಿಸಿದ್ದರೂ, ಸಾರ್ವಜನಿಕರ ಕುತೂಹಲ ಕಡಿಮೆಯಾಗದೇ ಜನರು ಸ್ಥಳಕ್ಕೆ ಭೇಟಿ ನೀಡಿ ಉತ್ಖನನ ಕಾರ್ಯವನ್ನು ವೀಕ್ಷಿಸುತ್ತಿದ್ದಾರೆ.

