ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ತಡರಾತ್ರಿ ರಕ್ತದೋಕುಳಿ ಹರಿದಿದ್ದು, ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಭೀಕರ ಗ್ಯಾಂಗ್‌ವಾರ್‌ಗೆ ತಿರುಗಿ ರೌಡಿಶೀಟರ್ ಒಬ್ಬನ ಬರ್ಬರ ಹತ್ಯೆಗೆ ಕಾರಣವಾಗಿದೆ. ಈ ಘಟನೆ ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ.
ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದ ರಸ್ತೆ ಬಳಿಯ ಪಟೇಲ್ ಸಾಮಿಲ್ ಬಳಿ ಈ ದುರ್ಘಟನೆ ಸಂಭವಿಸಿದೆ. ಸಿಗರೇಟ್ ವಿಚಾರವಾಗಿ ಎರಡು ಯುವಕರ ಗುಂಪುಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ, ಕ್ಷಣಾರ್ಧದಲ್ಲೇ ಗಲಾಟೆ ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸುವ ಮಟ್ಟಕ್ಕೆ ಏರಿದೆ.
ಈ ವೇಳೆ ಮರಳಿಗ ಗ್ರಾಮದ ನಿವಾಸಿ ಹಾಗೂ ರೌಡಿಶೀಟರ್ ಯಶ್ವಂತ್ ಅಲಿಯಾಸ್ ‘ಕಜ್ಜಿ ಅಭಿ’ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಯಶ್ವಂತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಗ್ಯಾಂಗ್‌ವಾರ್‌ನಲ್ಲಿ ಯಶ್ವಂತ್ ಜೊತೆಗಿದ್ದ ಗೊರವನಹಳ್ಳಿ ಗ್ರಾಮದ ಸಚಿನ್ ಮತ್ತು ದರ್ಶನ್ ಮೇಲೆಯೂ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇವರಿಬ್ಬರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಭದ್ರತೆ ಒದಗಿಸಲಾಗಿದೆ.

