ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಪಾವತಿಸದ ಮಾಲೀಕರ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಠಿಣ ಕ್ರಮಕ್ಕೆ ಮುಂದಾಗಿದೆ. ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಮಾರು 7 ಸಾವಿರ ಆಸ್ತಿಗಳನ್ನು ಹರಾಜು ಹಾಕಲು ಜಿಬಿಎ ತೀರ್ಮಾನಿಸಿದೆ.
ಜಿಬಿಎ ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳಲ್ಲಿ ಒಟ್ಟು 437 ಕೋಟಿ ರೂಪಾಯಿಗಿಂತ ಹೆಚ್ಚಿನ ಆಸ್ತಿ ತೆರಿಗೆ ಬಾಕಿ ಇರುವುದಾಗಿ ತಿಳಿದುಬಂದಿದೆ. ತೆರಿಗೆ ಪಾವತಿಸದ ಮಾಲೀಕರಿಗೆ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿದ್ದರೂ, ಬಹುತೇಕರು ಬಾಕಿ ತೆರಿಗೆ ಪಾವತಿಸದ ಹಿನ್ನೆಲೆ ಜಪ್ತಿ ಆದೇಶ ಪ್ರಕಟಿಸಲಾಗಿದೆ.
ಜಪ್ತಿ ಆದೇಶ ಹೊರಡಿಸಿದ ಬಳಿಕವೂ ತೆರಿಗೆ ಪಾವತಿಸದಿದ್ದರೆ ಫೆಬ್ರವರಿ 17ರಂದು ಜಂಟಿ ಆಯುಕ್ತರ ಕಚೇರಿಗಳಲ್ಲಿ ಆಸ್ತಿಗಳನ್ನು ಹರಾಜು ಹಾಕಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿರುವ 5 ನಗರ ಪಾಲಿಕೆಗಳಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಲಿದ್ದು, ತೆರಿಗೆ ಬಾಕಿ ಪಾವತಿಸಲು ಮಾಲೀಕರಿಗೆ ಕೊನೆಯ ಅವಕಾಶ ನೀಡಲಾಗಿದೆ. ಹರಾಜು ಪ್ರಕ್ರಿಯೆ ಮೂಲಕ ಬಾಕಿ ತೆರಿಗೆ ವಸೂಲಿ ಮಾಡಲು ಜಿಬಿಎ ಕ್ರಮ ಕೈಗೊಂಡಿದೆ.

