ವಾಷಿಂಗ್ಟನ್: ದೇವರೇ ನನ್ನನ್ನು ರಕ್ಷಣೆ ಮಾಡಿದ್ದಾನೆ ಎಂದು ತಮ್ಮ ಹತ್ಯೆ ಯತ್ನದ ಕುರಿತು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ರ‍್ಯಾಲಿಯಲ್ಲಿ ಹತ್ಯೆಯ ಪ್ರಯತ್ನದ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತು ಪ್ರೀತಿ ತೋರಿದ ಅಮೆರಿಕದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ದೇವರು ಇದ್ದುದರಿಂದ ನಾನು ಸುರಕ್ಷಿತವಾಗಿರುತ್ತೇನೆ. ಗುಂಡುಗಳು ನಮ್ಮ ಮೇಲೆ ಹಾರುತ್ತಿದ್ದವು. ಆದರೆ ಸಾರ್ವಜನಿಕರು ನನ್ನನ್ನು ಪ್ರೀತಿಸುತ್ತಾರೆ. ನಾವು ಎಂದಿಗೂ ಹಿಂದೆ ಸರಿಯುವುದಿಲ್ಲ. ನಾನು ಈ ರಾಷ್ಟ್ರದ ಅಭಿವೃದ್ಧಿಗೆ ಪ್ರತಿಜ್ಞೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಮಿಲ್ವಾಕೀಯಲ್ಲಿ ನಡೆದ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪಾಲ್ಗೊಂಡಿದ್ದರು. ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ದುಷ್ಕರ್ಮಿಯ ಗುಂಡೇಟಿನಿಂದ ಪೆಟ್ಟಾಗಿದ್ದ ಬಲ ಕಿವಿಯ ಮೇಲೆ ಬ್ಯಾಂಡೇಜ್ ಧರಿಸಿದ ಟ್ರಂಪ್ ಆಗಮಿಸಿದ್ದರು. ಗಾಡ್ ಬ್ಲೆಸ್ ಅಮೆರಿಕಾ ಎಂಬ ಗೀತೆಯನ್ನು ಹಾಡುತ್ತಿದ್ದಂತೆ ‘ಯುಎಸ್‌ಎ, ಯುಎಸ್‌ಎ’ ಎಂಬ ಘೋಷಣೆಯೊಂದಿಗೆ ಟ್ರಂಪ್ ವೇದಿಕೆ ಪ್ರವೇಶಿಸಿದರು.
ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ. 4 ತಿಂಗಳಲ್ಲಿ ನಾವು ನಂಬಲಾಗದ ವಿಜಯವನ್ನು ಸಾಧಿಸುತ್ತೇವೆ. ಎಲ್ಲಾ ಧರ್ಮಗಳು, ಜನರು ಶಾಂತಿ ಮತ್ತು ಸಮೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸುತ್ತೇವೆ ಎಂದಿದ್ದಾರೆ ಟ್ರಂಪ್.
ಅಧ್ಯಕ್ಷೀಯ ಚುನಾವಣೆಯಿಂದ ಜೋ ಬೈಡನ್ ದೂರ?
ಅಮೆರಿಕ ಅಧ್ಯಕ್ಷ ಜೋ ಬೈಡನ್ ಇದೇ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಸಲು ಸಿದ್ಧರಾಗಿದ್ದಾರೆ ಆದರೆ ಅವರ ಆರೋಗ್ಯ ಹದಗೆಡುತ್ತಿದೆ. ಜತೆಗೆ ಟ್ರಂಪ್ನಿಂದ ಎದುರಿಸುತ್ತಿರುವ ಕಠಿಣ ಸವಾಲಿನಿಂದಾಗಿ ಅನೇಕ ಡೆಮಾಕ್ರೆಟಿಕ್ ನಾಯಕರು ಅವರನ್ನು ಚುನಾವಣಾ ಕಣದಿಂದ ಹೊರಗಿಡುವಂತೆ ಸೂಚಿಸಿದ್ದಾರೆ.
81 ವರ್ಷದ ಜೋ ಬೈಡನ್ಗೆ ಮರೆವಿನ ಕಾಯಿಲೆ ಇದ್ದು ಈಗ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಮಾಜಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಚಕ್ ಶುಮರ್ ಸೇರಿದಂತೆ ಡೆಮಾಕ್ರಟಿಕ್ ಪಕ್ಷದ ಉನ್ನತ ನಾಯಕರು ಬೈಡನ್ ಅವರನ್ನು ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಕೇಳಿಕೊಂಡಿದ್ದಾರೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಹಲ್ಲೆ ನಂತರ ಬೈಡನ್ ಆಡಳಿತದ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗಲಿದೆ. ಟ್ರಂಪ್ಗೆ ದೇಶದ ಬೆಂಬಲ ಹಾಗೂ ಸಹಾನುಭೂತಿ ಸಿಗುತ್ತಿದೆ. ವರದಿಗಳ ಪ್ರಕಾರ, ನವೆಂಬರ್ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಬೈಡನ್ ಭಾವಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಪಕ್ಷದ ಅನೇಕರ ಒತ್ತಡಕ್ಕೆ ಮಣಿದು ರೇಸ್ನಿಂದ ಹೊರಗುಳಿಯಬೇಕಾಗಬಹುದು.

