ನವದೆಹಲಿ: ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 2,700 ರೂ.ಯಷ್ಟು ಏರಿಕೆಯಾಗಿದ್ದು, ಸರ್ವಕಾಲಿಕ ಗರಿಷ್ಠ ಮಟ್ಟದ 1,18,900 ರೂ. ಬೆಲೆಗೆ ತಲುಪಿದೆ. ಅಮೆರಿಕವು ಎಚ್-1ಬಿ ವೀಸಾ ಶುಲ್ಕವನ್ನು ಹೆಚ್ಚಿಸಿದ ನಂತರದಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಮತ್ತಷ್ಟು ಕುಸಿದಿದೆ. ಈ ನಡುವೆ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಈ ಕ್ರಮದಿಂದ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿದ್ದು, 99.9% ರಷ್ಟು ಪರಿಶುದ್ಧ ಚಿನ್ನದ ಬೆಲೆ ಸೋಮವಾರದ ವಹಿವಾಟಿನ ಅಂತ್ಯದ ವೇಳೆಗೆ 10 ಗ್ರಾಂಗೆ 1,16,200 ರೂ. ಆಗಿತ್ತು.
ಇನ್ನು 99.5%ರಷ್ಟು ಪರಿಶುದ್ಧತೆಯು ಚಿನ್ನದ ಬೆಲೆಯು 2,650 ರೂ.ಯಷ್ಟು ಹೆಚ್ಚಳವಾಗಿ, 1,18,300 ರೂ.ಗೆ ತಲುಪಿದೆ ಎಂದು ಅಖಿಲ ಭಾರತ ಸರಾಫ್ ಒಕ್ಕೂಟ ತಿಳಿಸಿದೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದ ಪರಿಣಾಮ ಚಿನ್ನದ ಬೆಲೆ ಏರಿಕೆಯಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.
ಮಂಗಳವಾರ ಬೆಳ್ಳಿಯ ಬೆಲೆಯು ಕೆಜಿ ಗೆ 3,220 ರೂ. ಯಷ್ಟು ಹೆಚ್ಚಳವಾಗಿ 1,39,600 ರೂ.ಗೆ ತಲುಪಿದೆ. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 11,537 ರೂ. ಇದೆ. ಬೆಳ್ಳಿಯ ಬೆಲೆ ಇಂದು ತಟಸ್ಥ ಆಗಿದೆ. ಗ್ರಾಂ ಬೆಲೆ 140 ರೂ. ಆಗಿದೆ, ಕೆಜಿ ಬೆಲೆ 1,40,000 ರೂ ಆಗಿದೆ.

