ಬೆಂಗಳೂರು: ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ವಿಧೇಯಕ ಅಂಗೀಕಾರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಮನವಿ ಮಾಡಿದರು. ನಗರವನ್ನು 5 ಭಾಗಗಳನ್ನಾಗಿ ಮಾಡುವ ಗ್ರೇಟರ್ ಬೆಂಗಳೂರು ವಿಧೇಯಕ ಪೆಂಡಿಂಗ್ ಇಟ್ಟು, ಬಿಲ್ ಸಾಧಕ-ಬಾಧಕಗಳ ಚರ್ಚೆಗೆ ಸದನ ಸಮಿತಿ ರಚನೆ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.
ಶಾಸನ ರಚನಾ ಕಲಾಪದಲ್ಲಿ ವಿಧೇಯಕವನ್ನು ಪರ್ಯಾಲೋಚನೆಗಾಗಿ ಮಂಡಿಸಿದ ಉಪಮುಖ್ಯಮಂತ್ರಿ ಬೆಂಗಳೂರಿಗೆ ಹೊಸ ರೂಪ ನೀಡುವ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಇದಾಗಿದೆ. ಬೆಂಗಳೂರಿನ ಜನಸಂಖ್ಯೆ 1 ಕೋಟಿ 40 ಲಕ್ಷದಷ್ಟಿದೆ. ದೊಡ್ಡ ಸಮಸ್ಯೆಗಳಿವೆ. ಆಡಳಿತದಲ್ಲಿ ಸುಧಾರಣೆ ತರಬೇಕು. ನಾಗರಿಕರಿಗೆ ಹೆಚ್ಚು ಸೌಲಭ್ಯ ಕಲ್ಪಿಸಬೇಕು.
ಆಡಳಿತ ನಿಯಂತ್ರಣ ನೀಡಬೇಕು, ಆರ್ಥಿಕ ಶಕ್ತಿ ತುಂಬಬೇಕು. ಇದು ಮಹತ್ವದ ವಿಧೇಯಕವಾಗಿದ್ದು, ಒಪ್ಪಿಗೆ ನೀಡಬೇಕೆಂದು ಕೋರಿದರು.ಈ ಸಂದರ್ಭದಲ್ಲಿ ಮಾತನಾಡಿದ ವಿರೋಧಪಕ್ಷದ ನಾಯಕ ಆರ್.ಅಶೋಕ್, ವಿಧೇಯಕವನ್ನು ಬಾಕಿ ಉಳಿಸಬೇಕು. ಇದರ ಬಗ್ಗೆ ಸಮಗ್ರ ಚರ್ಚೆಯಾಗಬೇಕಾಗಿದ್ದು, ವಿಧಾನಸಭೆ ಮತ್ತು ವಿಧಾನಪರಿಷತ್ನ ಸದಸ್ಯರನ್ನೊಳಗೊಂಡ ಸದನ ಸಮಿತಿ ರಚಿಸಬೇಕೆಂದು ಸಲಹೆ ಮಾಡಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್, ಇದೊಂದು ಐತಿಹಾಸಿಕವಾದ ವಿಧೇಯಕ. ಈ ವಿಧೇಯಕದ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ಬೆಂಗಳೂರು ಪ್ರತಿನಿಧಿಸುವ ವಿಧಾನಸಭೆ, ವಿಧಾನಪರಿಷತ್ ಸದಸ್ಯರನ್ನೊಳಗೊಂಡ ಸದನ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಮತ್ತೆ ಮಾತನಾಡಿದ ಉಪಮುಖ್ಯಮಂತ್ರಿ, ವಿಧೇಯಕದ ಬಗ್ಗೆ ವಿಸ್ತೃತವಾದ ಚರ್ಚೆಯಾಗಬೇಕೆಂಬ ಆಲೋಚನೆಯಿದೆ. ಬೆಂಗಳೂರಿನ ಶಾಸಕರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಕೃಷ್ಣಭೈರೇಗೌಡ ಸೇರಿದಂತೆ ಹಲವರು ಸಾಕಷ್ಟು ಚರ್ಚೆಯಾಗಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ವ್ಯಾಪಕವಾದ ಚರ್ಚೆಯಾಗಲಿ. ನಾವು ಹರಿಬರಿ ಮಾಡುವುದಿಲ್ಲ. ಹೀಗಾಗಿ ಸದನ ಸಮಿತಿ ರಚನೆ ಮಾಡಲು ಒಪ್ಪಿಗೆ ಇದೆ ಎಂದು ಹೇಳಿದರು.