ಬೆಂಗಳೂರು: ದೇಶದ ಪ್ರಮುಖ ಮಹಾನಗರಗಳಾದ ಬೆಂಗಳೂರು ಮತ್ತು ಮುಂಬೈ ನಡುವಿನ ರೈಲು ಸಂಪರ್ಕಕ್ಕೆ ಮಹತ್ವದ ಉತ್ತೇಜನ ದೊರೆತಿದ್ದು, ಈ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ಹೊಸ ರೈಲು ಸೇವೆ ಕೆಎಸ್‌ಆರ್ ಬೆಂಗಳೂರು ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಡುವೆ ಸಂಚರಿಸಲಿದ್ದು, ಎರಡು ನಗರಗಳ ನಡುವಿನ ಸಂಪರ್ಕವನ್ನು ಇನ್ನಷ್ಟು ಬಲಪಡಿಸಲಿದೆ.
ಈ ಯೋಜನೆಗೆ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಅವರ ನಿರಂತರ ಪ್ರಯತ್ನಗಳು ಪ್ರಮುಖ ಕಾರಣವಾಗಿವೆ. ಡಿಸೆಂಬರ್ 2ರಂದು ನೈಋತ್ಯ ರೈಲ್ವೆಯ ಸ್ಥಾಯಿ ಸಮಿತಿಯ ಅಧ್ಯಯನ ಭೇಟಿ ವೇಳೆ ಅವರು ಈ ವಿಚಾರವನ್ನು ಪ್ರಸ್ತಾಪಿಸಿ, ವಂದೇ ಭಾರತ್ ಸ್ಲೀಪರ್ ರೈಲು ಪರಿಚಯಿಸಲು ಒತ್ತಾಯಿಸಿದ್ದರು. ಜೊತೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಅನ್ನು ಆರಂಭ ಅಥವಾ ಅಂತಿಮ ನಿಲ್ದಾಣವನ್ನಾಗಿ ಪರಿಗಣಿಸಲು ಸೂಚಿಸಿದ್ದರು.
ಪ್ರಸ್ತುತ ಈ ಮಾರ್ಗದಲ್ಲಿ ಹಲವು ರೈಲುಗಳು ಸಂಚರಿಸುತ್ತಿದ್ದರೂ, ಉದ್ಯಾನ್ ಎಕ್ಸ್‌ಪ್ರೆಸ್ ಮಾತ್ರ ನೇರ ಸಂಪರ್ಕ ಒದಗಿಸುತ್ತಿದೆ. ಸುಮಾರು 1,136 ಕಿಲೋಮೀಟರ್ ದೂರವನ್ನು ಈ ರೈಲು 23ರಿಂದ 24 ಗಂಟೆಗಳ ಅವಧಿಯಲ್ಲಿ ಕ್ರಮಿಸುತ್ತದೆ.
ಹೊಸ ವಂದೇ ಭಾರತ್ ಸ್ಲೀಪರ್ ರೈಲು ಪರಿಚಯವಾದಲ್ಲಿ ಪ್ರಯಾಣ ಸಮಯವು ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದ್ದು, ಪ್ರಯಾಣಿಕರಿಗೆ ವೇಗದ ಜೊತೆಗೆ ಹೆಚ್ಚಿನ ಆರಾಮದಾಯಕ ಸೇವೆ ಲಭ್ಯವಾಗಲಿದೆ.

