ಚಂಡೀಗಢ, ಎಪ್ರಿಲ್ 02: ನಗರದ ಸೆಕ್ಟರ್ 37ರಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಮೇಲೆ ಬುಧವಾರ ಸಂಜೆ ದುಷ್ಕರ್ಮಿಗಳು ಹ್ಯಾಂಡ್ ಗ್ರೆನೇಡ್ ಎಸೆದ ಘಟನೆ ನಡೆದಿದೆ. ಇಬ್ಬರು ಅಪರಿಚಿತರು ನಡೆಸಿದ ಈ ದಾಳಿಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಗ್ರೆನೇಡ್ ಕಚೇರಿ ಆವರಣದ ಗೋಡೆಯ ಬಳಿಯ ಪಾರ್ಕಿಂಗ್ ಪ್ರದೇಶದಲ್ಲಿ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆ ಇದ್ದರೂ ಜನರಿಗೆ ಹಾನಿಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ದಾಳಿಯ ಜವಾಬ್ದಾರಿಯನ್ನು ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ‘ಬಬ್ಬರ್ ಖಾಲ್ಸಾ’ ಸಾಮಾಜಿಕ ಜಾಲತಾಣಗಳ ಮೂಲಕ ಹೊತ್ತುಕೊಂಡಿದೆ. “ನಕಲಿ ಎನ್‌ಕೌಂಟರ್‌ನಲ್ಲಿ ಹತರಾದ ನಮ್ಮ ಸಹೋದರ ಜಿಂಟಾ ಮೆಹ್ರಾಜ್ ಸಾವಿಗೆ ಸೇಡು ತೀರಿಸಲು ದಾಳಿ ನಡೆಸಲಾಗಿದೆ” ಎಂದು ಸಂಘಟನೆ ಹೇಳಿದೆ.
ದಾಳಿಗೆ ಚೀನಾ ನಿರ್ಮಿತ ‘ಪಿ-86’ ಹ್ಯಾಂಡ್ ಗ್ರೆನೇಡ್ ಬಳಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ಸುಮಾರು 10 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಫೋಟದ ಕ್ಷಣಗಳು ಅದರಲ್ಲಿ ಸೆರೆಯಾಗಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಎಸ್‌ಎಸ್‌ಪಿ ಕನ್ವರ್‌ದೀಪ್ ಕೌರ್ ನೇತೃತ್ವದ ಪೊಲೀಸ್ ತಂಡ ಹಾಗೂ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಶಂಕಿತರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ನಗರಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

