ಬೆಂಗಳೂರು : ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಗೆ ರಾಜ್ಯ ಸರ್ಕಾರ ದಿನಾಂಕ ಘೋಷಣೆ ಮಾಡಿದೆ. ಅಕ್ಟೋಬರ್ 7 ಹಾಗೂ 9 ರಂದು ಎರಡು ಕಂತಿನ ಹಣ ಮಹಿಳೆಯರಿಗೆ ಸಂದಾಯವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ನೀಡಿದ್ದಾರೆ.
ತಾಂತ್ರಿಕ ಕಾರಣಗಳಿಂದ ವಿಳಂಬಗೊಂಡಿದ್ದ ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಇದೇ 7 ಮತ್ತು 9 ರಂದು ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ ಗುರುವಾರ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ರಾಜ್ಯದ ಯಜಮಾನಿಯರ ಖಾತೆಗೆ ಎರಡೂ ಕಂತಿನ ಹಣವನ್ನು ಹಾಕಲಾಗುವುದು. ಕೆಲವೊಂದು ತಾಂತ್ರಿಕ ಕಾರಣಗಳಿಂದ ಹಣ ಹಾಕುವುದು ವಿಳಂಬವಾಗಿತ್ತು ಎಂದರು.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ನವರಾತ್ರಿ ಹಬ್ಬದ ವೇಳೆ ಎರಡು ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆಲ್ಲಾ ಬರುತ್ತಿದ್ದು, ಹಣ ಸಿಕ್ಕ ಬಳಿಕ ಭರ್ಜರಿಯಾಗಿ ಹೋಳಿಗೆ ಊಟ ಮಾಡಿ ಎಂದು ಅವರು ಹೇಳಿದರು.