ಲಖನೌ: ವಾರಣಾಸಿಯ ಜ್ಞಾನವಾಪಿ ಪ್ರಾರ್ಥನಾ ಸ್ಥಳ ಎಂದು ಕರೆಯುವುದರಲ್ಲಿ ಅರ್ಥವಿಲ್ಲ. ಇದು ನಿಜವಾಗಿ ಶಿವನ ದೇವಾಲಯ. ಜ್ಞಾನವಾಪಿಯನ್ನು ಮಸೀದಿ ಎಂದು ಕರೆಯಲಾಗುತ್ತಿರುವುದರಿಂದ ಪರಮೇಶ್ವರನ ಸನ್ನಿಧಿಗೆ ಬರುವ ಭಕ್ತರಿಗೆ ಗೊಂದಲ ಉಂಟಾಗುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ. ಇದೀಗ ಅವರ ಹೇಳಿಕೆ ಸಂಚಲನ ಮೂಡಿಸಿದೆ.
ದೀನ್ ದಯಾಳ್ ಉಪಾಧ್ಯಾಯ ಗೋರಖ್‌ಪುರ ವಿಶ್ವವಿದ್ಯಾನಿಲಯದಲ್ಲಿ ‘ಸಾಮರಸ್ಯ ಸಮಾಜ ನಿರ್ಮಾಣದಲ್ಲಿ ನಾಥಪಂಥದವರ ಕೊಡುಗೆ’ ಎಂಬ ವಿಷಯದ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ‘ಕೆಲವರು ಜ್ಞಾನವಾಪಿಯನ್ನು ಮಸೀದಿ ಎಂದು ಕರೆಯುವುದು ದುರದೃಷ್ಟಕರವಾಗಿದೆ. ಅದು ಭಗವಾನ್ ವಿಶ್ವನಾಥನ ಸಾಕಾರವಾಗಿದೆ ಎಂದು ಹೇಳಿದ್ದಾರೆ.
“ಭಗವಾನ್ ವಿಶ್ವನಾಥನ ಸಾಕಾರ ಆಗಿರುವ ಜ್ಞಾನವಾಪಿಯನ್ನು ( ಮಸೀದಿ ಎಂದು ಕರೆಯುವುದು ದುರದೃಷ್ಟಕರ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಇದು ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ದೊಡ್ಡ ಅಡಚಣೆಯಾಗಿ ಪರಿಣಮಿಸಿದೆ. ಈ ಅಡೆತಡೆಯನ್ನು ಹಿಂದೆಯೇ ಅರ್ಥಮಾಡಿಕೊಂಡು ಎಚ್ಚರಿಸಿದ್ದರೆ ಭಾರತ ಎಂದಿಗೂ ವಸಾಹತುಶಾಹಿ ಆಡಳಿತಗಾರರ ಹಿಡಿತಕ್ಕೆ ಬರುತ್ತಿರಲಿಲ್ಲ ಎಂದು ಯೋಗಿ ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ಹೇಳಿಕೆಗೆ ಮಾಜವಾದಿ ಪಕ್ಷ ಪ್ರತಿಕ್ರಿಯೆ ನೀಡಿದ್ದು ಆದಿತ್ಯನಾಥ್ ಅವರ ಹೇಳಿಕೆಗಳ ವಿರುದ್ಧ ವಾಗ್ದಾಳಿ ನಡೆಸಿತು. ಎಸ್ಪಿ ವಕ್ತಾರ ಅಬ್ಬಾಸ್ ಹೈದರ್ ಪಿಟಿಐಗೆ ಪ್ರತಿಕ್ರಿಯಿಸಿ, “ಅವರು (ಯೋಗಿ ಆದಿತ್ಯನಾಥ್) ನ್ಯಾಯಾಲಯಕ್ಕೆ ಗೌರವವನ್ನು ನೀಡುವುದಿಲ್ಲ ಎಂದು ತೋರುತ್ತಿದೆ, ವಿಷಯವು ನ್ಯಾಯಾಲಯದಲ್ಲಿ ಬಾಕಿಯಿದೆ, ಮುಖ್ಯಮಂತ್ರಿಗಳು ಸಂವಿಧಾನದ ಪ್ರತಿಜ್ಞೆ ಮಾಡಿದರೂ ನ್ಯಾಯಾಲಯಕ್ಕೆ ಸರಿಯಾದ ಗೌರವ ನೀಡದಿರುವುದು ವಿಷಾದನೀಯ.
17ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಜ್ಞಾನವಾಪಿ ಪ್ರದೇಶದಲ್ಲಿ ಶಿವನ ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ಸಮುದಾಯಗಳು ಆರೋಪಿಸುತ್ತಿವೆ. ಎರಡೂ ಕಡೆಯವರು ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ. 2024ರ ಫೆಬ್ರವರಿಯಲ್ಲಿ ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂ ಭಕ್ತರಿಗೆ ಪೂಜೆ ಮಾಡಲು ಅವಕಾಶ ನೀಡಿದೆ.

