ಭುವನಹಳ್ಳಿ: ಜೆಡಿಎಸ್ ಭದ್ರಕೋಟೆಯಲ್ಲಿ ಪಕ್ಷದ 25 ವರ್ಷ ಪೂರ್ಣದ ಹಿನ್ನಲೆಯಲ್ಲಿ ಆಯೋಜಿಸಲಾದ ಜನತಾ ಸಮಾವೇಶಕ್ಕೆ ಮನೆ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡರು ನೇರವಾಗಿ ಭುವನಹಳ್ಳಿಯ ಜನತಾ ಸಮಾವೇಶದ ವೇದಿಕೆಯ ಬಳಿ ಆಗಮಿಸಿದರು. ಅವರು ಗಾಲಿ ಕುರ್ಚಿ ಮೂಲಕ ರ್ಯಾಂಪ್ ಮೇಲೆ ಏರಿ, ನೆರೆದಿದ್ದ ಸಹಸ್ರಾರು ಜನರನ್ನು ಕೈಬೀಸಿ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಸಕರು ಎಚ್.ಡಿ. ರೇವಣ್ಣ, ಸ್ವರೂಪ್ ಪ್ರಕಾಶ್, ಸೂರಜ್ ರೇವಣ್ಣ ಸಹ ಅವರ ಜೊತೆಗೆ ಇದ್ದರು.
ಕೆಲ ನಿಮಿಷಗಳ ಬಳಿಕ ಕೇಂದ್ರ ಸಚಿವ ಕುಮಾರಸ್ವಾಮಿ ಸಹ ರ್ಯಾಂಪ್ ಮೂಲಕ ವೇದಿಕೆಗೆ ಆಗಮಿಸಿ, ಸಭಾಂಗಣದಲ್ಲಿ ನೆರೆದಿದ್ದ ಲಕ್ಷಾಂತರ ಜನರಿಗೆ ಕೈಬೀಸಿ ಸಂತಸ ವ್ಯಕ್ತಪಡಿಸಿದರು. ಜನರ ಹರ್ಷೋದ್ಗಾರವು ಮುಗಿಲುಮುಟ್ಟಿದಂತೆ ಆಗಿತ್ತು.
ಜೆಡಿಎಸ್ ಭದ್ರಕೋಟೆಯಲ್ಲಿ ಪಕ್ಷದ 25 ವರ್ಷ ಪೂರ್ಣದ ಹಿನ್ನಲೆಯಲ್ಲಿ ಆಯೋಜಿಸಲಾದ ಜನತಾ ಸಮಾವೇಶಕ್ಕೆ, ಹಾಸನ ಜಿಲ್ಲೆ ಮತ್ತು ಪಕ್ಕದ ಜಿಲ್ಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದರು.
ವೇದಿಕೆಗೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರು ಎಚ್.ಡಿ. ರೇವಣ್ಣ, ಸ್ವರೂಪ್ ಪ್ರಕಾಶ್ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ 2 ಲಕ್ಷಕ್ಕೂ ಹೆಚ್ಚು ಜನ ಮತ್ತು ಕಾರ್ಯಕರ್ತರು ಸಮಾವೇಶದಲ್ಲಿ ಆಗಮಿಸುವ ನಿರೀಕ್ಷೆಯಿದೆ ಎಂದಿದ್ದರು. ಆದರೆ, ಪಕ್ಷದ ನಿರೀಕ್ಷೆಗೂ ಮೀರಿ ಜನರ ಹೆಚ್ಚಿನ ಹರಿವು ಆಗಮಿಸಿದ್ದು, ವೇದಿಕೆಯ ಮುಂದೆ ಅಗ್ಗಿ ಹಾಕಲಾಗಿದ್ದ ಬಹುತೇಕ ಕುರ್ಚಿಗಳು ಕೂಡ ಭರ್ತಿಯಾಗಿದ್ದವು.
ಸಂಚಾರ ದಟ್ಟಣೆ:
ವೇದಿಕೆಗೆ ಆಗಮಿಸಲು ಜನರ ಪ್ರಬಲ ಹರಿವು ಟ್ರಾಫಿಕ್ ಜಾಮ್ ಗೆ ಕಾರಣವಾಯಿತು. ಭುವನಹಳ್ಳಿ ಸಂಪರ್ಕ ರಸ್ತೆಗಳಲ್ಲಿನ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರಿಗೆ ಹರಸಾಹಸಪೂರ್ವಕ ಕಾರ್ಯ ನಿರ್ವಹಿಸಬೇಕಾಯಿತು.
ಭುವನಹಳ್ಳಿ ಕ್ರಾಸ್, ಡೈರಿ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿನ ಸಾವಿರಾರು ಬಸ್‌ಗಳು ಹಾಗೂ ಖಾಸಗಿ ವಾಹನಗಳು ಒಂದೇ ಸಮಯದಲ್ಲಿ ಬಂದ ಹಿನ್ನಲೆ ಸಂಚಾರ ದಟ್ಟಣೆ ಉಂಟಾಯಿತು. ರಾಷ್ಟ್ರೀಯ ಹೆದ್ದಾರಿ ೭೫ರ ಉದ್ದಕ್ಕೂ ವಾಹನಗಳು ನಿಂತಿರುವ ದೃಶ್ಯ ಕಂಡುಬಂತು.

